ಯುವ ಸಮುದಾಯ ಹೊಸ ಅಧ್ಯಯನ ನಡೆಸಲಿ

12 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಇತಿಹಾಸ ದರ್ಶವಾಗಬೇಕಾದರೆ ಋಷಿಗಳ ಮನಸ್ಸು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಭಾರತವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ ಎಂದು ಲೇಖಕ ಜಿ.ಬಿ. ಹರೀಶ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವೀರ ಸಾವರಕರ ಗೆಳೆಯರ ಬಳಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಹಿಂದು ಸಂಸ್ಕೃತಿ ಪಸರಿಸಿದ್ದೇ ಒಂದು ಇತಿಹಾಸ. ನಮ್ಮ ಋಷಿ ಮುನಿಗಳು, ರಾಜ-ಮಹಾರಾಜರು, ಶಿಲ್ಪಿಗಳು ವಿದೇಶ ಸಂಸ್ಕೃತಿ ಗೌರವಿಸುವ ಜತೆಗೆ ನ್ಮಮ ಸಂಸ್ಕೃತಿ ಪಸರಿಸುವ ಕೆಲಸ ಮಾಡಿದ್ದಾರೆ. ಶ್ರೀಲಂಕಾ, ಭೂತಾನ್, ಲಾವೋಸ್, ವಿಯೆಟ್ನಾಂ ಸೇರಿ ಇಡೀ ಪ್ರಪಂಚದಲ್ಲಿ ಹಿಂದು ಸಂಸ್ಕೃತಿ ಹಾಸುಹೊಕ್ಕಿದೆ. ಈ ಬಗ್ಗೆ ಯುವ ಸಮುದಾಯ ಹೊಸ ಅಧ್ಯಯನ ನಡೆಸಲಿ ಎಂದರು.
ಆಗ್ನೇಯ ಏಷ್ಯಾ ದೇಶಗಳಲ್ಲಿ ಬೌದ್ಧನ ವಿಗ್ರಹಗಳು, ಚೀನಾದಲ್ಲಿ ಶಿವಲಿಂಗ, ನರಸಿಂಹನ ವಿಗ್ರಹ ಮತ್ತು ಉಪಾಸನೆಗಳಿದ್ದವು. ರಷ್ಯಾದಲ್ಲಿ ಬೌದ್ಧನ 100 ಕುರುಹುಗಳು ಸಾಮಾನ್ಯವಾಗಿ ಸಿಗುತ್ತವೆ. ಮುಖ್ಯವಾಗಿ ಚೀನಾ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುವುದಲ್ಲದೆ ಬುದ್ಧ ಭಾರತೀಯನಲ್ಲ ಎಂಬುದನ್ನು ಬಿಂಬಿಸಲು ವ್ಯವಸ್ಥಿತವಾಗಿ ಷಡ್ಯಂತರ ರೂಪಿಸುತ್ತಿದೆ ಎಂದರು.
ಸಾಹಿತಿ ಹರ್ಷ ಡಂಬಳ ಲೋಕಾರ್ಪಣೆಗೊಂಡ ಕೃತಿಗಳ ಕುರಿತು ಮಾತನಾಡಿ, ಹಣ ಇದ್ದವರಿಗೂ ಪುಸ್ತಕ ಬರೆಯುವ ಗೀಳು ಅಂಟಿದೆ. ಇಂತಹ ಕೃತಿಗಳಲ್ಲಿ ಗಟ್ಟಿಯಾದ ಬರವಣಿಗೆ ಇಲ್ಲ. ಸಾರಸತ್ವ ಲೋಕಕ್ಕೆ ಗಟ್ಟಿ ಬರುವಣಿಗೆ ಬೇಕಿದೆ. ಇಸ್ಲಾಂ, ಕ್ರೈಸ್ತ ಸಮಾಜ ಹಿಂದು ಸಂಸ್ಕೃತಿ ನಾಶಪಡಿಸುವ ಹುನ್ನಾರ ನಡೆಸಿವೆ. ಕಮುನಿಸಂ ಕಪಿಮುಷ್ಠಿಯಿಂದ ಸಮಾಜ ಮುಕ್ತಗೊಳಿಸುವ, ಜವಾಬ್ದಾರಿ, ಶಿಕ್ಷಣ ಮಹತ್ವ ಬಗ್ಗೆ ಪುಸ್ತಕ ಬೆಳಕು ಚೆಲ್ಲುತ್ತವೆ ಎಂದರು.
‘ಎದ್ದೇಳು ಭಾರತೀಯ’, ‘ಹಿಂದೂ ಎಂದರೇನು?’, ‘ಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕಥೆಗಳು’ ಹಾಗೂ ‘ಭಗವಾನ್ ಬುದ್ಧನ ಧಮ್ಮಪದ’ ಕೃತಿಗಳು ಬಿಡುಗಡೆ ಮಾಡಲಾಯಿತು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಸಂಘ ಪ್ರಚಾರಕ ಕಾಶಿ ನಾಗರಾಜ, ಇತರರು ಇದ್ದರು.
ಸಾವರಕರ ಗೆಳೆಯರ ಬಳಗದ ಗುರುದತ್ತ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾನಂದ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net