

ಮೈಸೂರು: ಮತ್ತೊಬ್ಬರ ಜೀವ ಉಳಿಸಲು ಸಹಾಯವಾಗುವ ರಕ್ತದಾನ ಅತ್ಯಂತ ಶ್ರೆಷ್ಠವಾದುದು. ಈ ಕಾರ್ಯದಲ್ಲಿ ಯುವ ಸಮುದಾಯ ಹೆಚ್ಚಿನ ಆಸಕ್ತಿ ವಹಿಸಿ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಹಾಗೂ ಲಯನ್ಸ್ ಬ್ಲಡ್ ಸೆಂಟರ್ ಜೀವಧಾರದಿಂದ ನಗರದ ಎನ್‌ಐಇ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ರಕ್ತದಾನಿ ದಿನಾಚರಣೆ ಹಾಗೂ ಜೀವ ರಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಆರೋಗ್ಯದ ಕಾಳಜಿಯೂ ಅಷ್ಟೇ ಅವಶ್ಯ. ಸಕಾಲದಲ್ಲಿ ರಕ್ತ ದೊರೆಯುವುದು ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೋವಿಡ್ ಸಂದರ್ಭದಲ್ಲಿ ರಕ್ತದಾನಿಗಳ ಸೇವೆ ಮತ್ತು ರಕ್ತನಿಧಿ ಕೇಂದ್ರಗಳ ಜವಾಬ್ದಾರಿಯುತ ಕೆಲಸ ಶ್ಲಾಘನೀಯವಾದುದು. ಸಂಘ-ಸಂಸ್ಥೆಗಳು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಇನ್ನಷ್ಟು ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.
ರಕ್ತದಾನಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಕ್ತದಾನಿಗಳಿಗೆ ಸರ್ಕಾರಿ ಸವಲತ್ತಿನಲ್ಲಿ ಪ್ರಮುಖ ಆದ್ಯತೆ, ಸಬ್ಸಿಡಿ ಯೋಜನೆಗಳನ್ನು ಕಲ್ಪಿಸಲು ಸರ್ಕಾರ ಮುಂದಾದರೆ ಹೆಚ್ಚಿನ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದೆ ಬರುತ್ತಾರೆ. ಇದರಿಂದ ರಕ್ತದಾನಿಗಳ ಕೊರತೆ ನೀಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮೇಯರ್ ಶಿವಕುಮಾರ್ ಮಾತನಾಡಿ, ರಕ್ತದಾನ ಇನ್ನೊಂದು ಜೀವ ಉಳಿಸಬಲ್ಲ ಸಂಜೀವಿನಿಯಾಗಿದ್ದು, ದಾನಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಆಧುನಿಕ ದಿನದಲ್ಲಿ ರಕ್ತದಾನದ ಅವಶ್ಯಕತೆ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯ ಎಂದರು.
ರಕ್ತ, ನೇತ್ರ, ದೇಹದಾನ ಪವಿತ್ರವಾದುದು. ಇದರಿಂದ ಮತ್ತೊಬ್ಬರ ಜೀವವನ್ನು ಕಾಪಾಡಲು ಸಹಕಾರಿ ಅಗುತ್ತದೆ. ಆದ್ದರಿಂದ ಇಂತಹ ಸಾಮಾಜಿಕ ಕಾರ್ಯಗಳು ಹೆಚ್ಚಾಗಬೇಕು. ಎಲ್ಲರೂ ತಮ್ಮಿಂದ ಅಗುವ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
30ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ಕೇಶವಗೌಡ, ನಂಜುಂಡಸ್ವಾಮಿ, ಮೇಧಾ, ಅನನ್ಯ ಪ್ರಭು, ಗಿರಿಜಾ ಪಾಟೀಲ್, ಹರೀಶ್.ಪಿ, ಮಸರ ರಾಮ್ ಮಾಲಿ, ಗೋಪಾಲ್, ಎಸ್.ರಾಮಚಂದ್ರ , ಶಿವಕುಮಾರ್ ಹಾಂಜಿ, ಸುಹಾಸ್ ಅವರಿಗೆ ಜೀವ ರಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಲ್ಲದೆ, ಅತಿ ಹೆಚ್ಚು ರಕ್ತದಾನ ಶಿಬಿರದ ಆಯೋಜಕರಾದ ಜೆಕೆ ಟೈರ್ ಆ್ಯಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಹಿರಿಯ ಪ್ರಧಾನ ವ್ಯವಸ್ಥಾಪಕ ಆರ್.ಜಗದೀಶ್, ಸಹಾಯಕ ವ್ಯವಸ್ಥಾಪಕ ನಾಗರಾಜ್, ಎಲ್ ಆ್ಯಂಡ್ ಟಿ ಟೆಕ್ನಾಲಜಿ ಸರ್ವಿಸಸ್ ಹಿರಿಯ ವ್ಯವಸ್ಥಾಪಕಿ ಲತಾ ಓಂಪ್ರಕಾಶ್, ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕ ಆನಂದ್ ಮಂಡೋತ್ ಹಾಗೂ ದೇವೇಂದ್ರ ಪರಿಹಾರೀಯ ಅವರನ್ನು ಅಭಿನಂದಿಸಲಾಯಿತು.
ಕೆ. ಆರ್.ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್ ಅವರು ರಕ್ತದಾನದ ಮಾಡುವುದರಿಂದ ಆಗುವ ಉಪಯೋಗಗಳ ಬಗ್ಗೆ ಜಾಗೃತಿ ಮೂಡಿಸಿದರು.
ಡಿಎಪಿಎಸಿಯು ಅಧಿಕಾರಿ ಡಾ. ಮಹಮ್ಮದ್ ಸಿರಾಜ್ ಅಹಮದ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುತ್ತಣ್ಣ, ಎನ್‌ಐಇ ಕಾಲೇಜ್ ಉಪ ಪ್ರಾಂಶುಪಾಲ ಡಾ.ಎಂ.ಎಸ್.ಗಣೇಶ್‌ಪ್ರಸಾದ್, ಆಯೋಜಕರಾದ ರಶ್ಮಿ , ಮಮತಾ, ಸುರೇಶ್, ಅಜಯ್ ಶಾಸ್ತ್ರಿ ಇತರರು ಇದ್ದರು.