

ಮೈಸೂರು: ಯುವ ಮನಸುಗಳನ್ನು ಆಕರ್ಷಿಸುವ ‘ಯುವ ಸಂಭ್ರಮ’ ಸೆ.10ರಿಂದ ಚಾಲನೆ ದೊರೆಯಲಿದ್ದು, ಈ ಹಿನ್ನೆಲೆಯಲ್ಲಿ ಈ ನೃತ್ಯೋತ್ಸವದ ‘ಶೀರ್ಷಿಕೆ ಗೀತೆ’ಯನ್ನು ಸೋಮವಾರ ಬಿಡುಗಡೆ ಮಾಡಲಾಯಿತು.
ದಸರಾ ಅಂಗವಾಗಿ 8 ದಿನಗಳ ಕಾಲ ನಿತ್ಯ ಸಂಜೆ 4ಕ್ಕೆ ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಖಾಸಗಿ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯಕ ವಿಜಯಪ್ರಕಾಶ್ ಹಾಡಿರುವ ‘ಹೆಜ್ಜೆ ಜತೆಗೆ ಹೆಜ್ಜೆ ಸೇರಿದೆ...ಸದ್ದು ಊರು ತುಂಬ ಕೇಳಿದೆ...’ ಎಂಬ ಗೀತೆಯನ್ನು ಪ್ರಸಾರ ಮಾಡಿ ಬಿಡುಗಡೆ ಮಾಡಲಾಯಿತು.
ಕೆಆರ್‌ಐ ಕನ್ಸಲ್ಟ್ ವತಿಯಿಂದ ನಿರ್ಮಿಸಿರುವ ಹಾಡಿಗೆ ಯುವ ಸಂಭ್ರಮ ಸಮಿತಿಯ ಸಮನ್ವಯಾಧಿಕಾರಿಯೂ ಆದ ಪಾಲಿಕೆಯ ಕಂದಾಯ ಉಪಆಯುಕ್ತ ಸೋಮಶೇಖರ್ ಜಿಗಣಿ ಮತ್ತು ಮನೋಜ್ ಸೌಗಂದ್ ಸಾಹಿತ್ಯ ರಚಿಸಿದ್ದು, ನೀತು ನಿನಾದ ಸಂಗೀತ ಸಂಯೋಜನೆ ಮಾಡಿರುವ ಗೀತೆಯು ಸಭಿಕರನ್ನು ಆಕರ್ಷಿಸುತ್ತಿದೆ.
ಈ ಹಾಡನ್ನು ಸಂಪೂರ್ಣ ಪ್ರಾಯೋಜನಕತ್ವದಲ್ಲಿ ಹೊರತರಲಾಗಿದ್ದು, ಸಮೃದ್ಧಿ ಡೆವಲಪರ್ಸ್ ಸಂಸ್ಥೆಯು ಸಹಕಾರ ನೀಡಿದೆ.
ಹಾಡಿನಲ್ಲಿ ಯುವ ಸಂಭ್ರಮದ ವೇದಿಕೆಯಲ್ಲಿ ಹೆಜ್ಜೆ ಹಾಕಲಿರುವ 5 ಕಾಲೇಜುಗಳ ವಿದ್ಯಾರ್ಥಿಗಳ ನೃತ್ಯದ ತುಣುಕಿನಲ್ಲಿ ನಟ ಯುವ ರಾಜ್‌ಕುಮಾರ್ ಹಾಗೂ ಯುವ ಸಂಭ್ರಮ ಉಪ ಸಮಿತಿಯ ಪದಾಧಿಕಾರಿಗಳು, ನಿರೂಪಣೆ ಮಾಡುವ ಕಲಾವಿದರು ಕಾಣಿಸಿಕೊಂಡಿದ್ದಾರೆ.
ದಸರಾ ಅಂಗವಾಗಿ ನಡೆಂುುವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಹಬ್ಬವಾದ ‘ಯುವ ಸಂಭ್ರಮ’ ಉದ್ಘಾಟನಾ ಕಾರ್ಯಕ್ರಮ ಸೆ.10ರಂದು ಸಂಜೆ 4ಕ್ಕೆ ನಡೆಯಲಿದ್ದು, ಚಲನಚಿತ್ರ ನಟ ಯುವ ರಾಜ್‌ಕುಮಾರ್, ನಟಿ ಅಮೃತಾ ಅಯ್ಯಂಗಾರ್ ಭಾಗವಹಿಸಲಿದ್ದಾರೆ.
500 ಕಾಲೇಜಿನ 20 ಸಾವಿರ ವಿದ್ಯಾರ್ಥಿಗಳು ವೈವಿಧ್ಯಮಯ ನೃತ್ಯ ಪ್ರಕಾರಗಳ ಮೂಲಕ ರಂಜಿಸಲಿದ್ದಾರೆ ಎಂದು ಯುವ ದಸರಾ ಉಪ ಸಮಿತಿಯ ಕಾರ್ಯಾಧ್ಯಕ್ಷ, ಉಪವಿಭಾಗಾಧಿಕಾರಿ ಆಶಪ್ಪ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಜಾನಪದ ನೃತ್ಯಗಳು, ಕನ್ನಡ ಸಿನಿವಾ ಆಧಾರಿತ ಆಧುನಿಕ ನೃತ್ಯಗಳು, ಸಾಹಿತ್ಯ, ದೇಶಭಕ್ತಿ, ಮಹಿಳಾ ಸಬಲೀಕರಣ, ಪರಿಸರ-ಅರಣ್ಯ, ಆಡಳಿತ, ಸಾವಾಜಿಕ ನ್ಯಾಯ, ವಿಜ್ಞಾನ-ತಂತ್ರಜ್ಞಾನ, ಇತಿಹಾಸ-ಪುರಾಣ, ಅಂಗವಿಕಲರ ಯಶೋಗಾಥೆಗಳು, ಶಿಕ್ಷಣ, ಕ್ರೀಡೆ, ಜನಕೇಂದ್ರಿತ, ಆರೋಗ್ಯ ಹೀಗೆ ನಿರ್ದಿಷ್ಟ ‘ಥೀಮ್’ ಆಧಾರಿತ ನೃತ್ಯರೂಪಕವನ್ನು ವಿದ್ಯಾರ್ಥಿಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಆಯ್ದ ತಂಡಗಳಿಗೆ ನವರಾತ್ರಿ ಸಂದರ್ಭದಲ್ಲಿ ನಡೆಯುವ ‘ಯುವ ದಸರಾ’ ವೇದಿಕೆಯಲ್ಲೂ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದರು.
ಸಮಿತಿ ಸಹ ಕಾರ್ಯಾಧ್ಯಕ್ಷ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಿ.ಶಿವಕುಮಾರ್, ಸಹ ಕಾರ್ಯದರ್ಶಿ ರವಿಕುಮಾರ್, ಪಾಲಿಕೆ ವಲಯ-6ರ ಕಚೇರಿ ಆಯುಕ್ತರೂ ಆದ ಸ್ವಮನ್ವಯಾಧಿಕಾರಿ ಎಂ.ಎಸ್.ಪ್ರತಿಭಾ, ಮೈಸೂರು ವಿವಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಾಪಕ ಡಾ.ಆರ್.ನಿಂಗರಾಜ್ ಇದ್ದರು.