

ಸೋಮವಾರಪೇಟೆ: ಯುವ ಶಕ್ತಿ ರಾಷ್ಟ್ರದ ಸಂಪತ್ತಾಗಬೇಕಾದರೆ ಮೌಲ್ಯಾಧಾರಿತ ಶಿಕ್ಷಣ ಸಿಗಬೇಕು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಯಡೂರು ಗ್ರಾಮದ ಬಿ.ಟಿ.ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಎಚ್.ಎನ್.ರಾಜು ನಿವೃತ್ತಿ ಹೊಂದಿದ ಕಾರಣ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡೆಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರಾಧ್ಯಾಪಕರು ಶ್ರದ್ಧೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಯ ಕಳೆಯಲು ಪಾಠ ಮಾಡಬಾರದು, ಗುರುಗಳು ವಿದ್ಯಾದಾನ ಮಾಡಬೇಕು. ಒಂದು ಸರ್ಕಾರಿ ಕಾಲೇಜು ಸಾಧನೆ ಮಾಡಬೇಕಾದರೆ ನಾಲ್ಕು ಚಕ್ರಗಳು ಸಮಾನವಾಗಿ ಚಲಿಸಬೇಕು. ಆಡಳಿತ ಮಂಡಳಿ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಹೊಂದಾಣಿಕೆ ಹಾಗೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಪರಿಕ್ಷಾಂಗ ವಿಭಾಗದ ಕುಲಪತಿ ಡಾ.ಪಿ.ಎಲ್.ಧರ್ಮ ಮಾತನಾಡಿ, ಪ್ರಾಧ್ಯಾಪಕರು, ಉಪನ್ಯಾಸಕರು, ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಉಪಯೋಗಿಕೊಂಡು ಗುಣಮಟ್ಟದ ಶಿಕ್ಷಣ ನೀಡುವುದು ಕರ್ತವ್ಯವಾಗಿದೆ. ಪ್ರತಿನಿತ್ಯ ಅಭ್ಯಾಸ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು. ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ, ಸಲಹೆಗಳೊಂದಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲ ಎಚ್.ಎನ್.ರಾಜು, 34 ವರ್ಷಗಳ ಕಾಲ ಕಾಲೇಜಿನಲ್ಲಿ ಪಾಠ ಮಾಡಿದ್ದು, ನನ್ನ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಉಪನ್ಯಾಸಕರ ಹುದ್ದೆಗಳು ಭರ್ತಿಯಾಗುವ ಕಾಲ ಕೂಡಿ ಬಂದಿದ್ದು, ಸರ್ಕಾರಿ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿದೆ ಎಂದು ಹೇಳಿದರು. ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಎಸ್.ಮಹೇಶ್, ಸದಸ್ಯರಾದ ಎಂ.ಪಿ.ಗೋಪಾಲ್, ಎಸ್.ಆರ್.ಸೋಮೇಶ್, ಪ್ರಾಂಶುಪಾಲರಾದ ಸುನೀತಾ ಇದ್ದರು.