ಯುವ ಲೇಖಕರು ಸೃಜನಶೀಲತೆ ಬಳಸಿಕೊಳ್ಳಿ

28kmr1
ಕಮಲನಗರದ ಡಾ.ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆಯಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಸಾಹಿತಿ ಸಂಗಮೇಶ್ವರ ಮುರ್ಕೆ ಬರೆದ ಬೀದರ್ ಜಿಲ್ಲೆಯ ಸಂಸ್ಕೃತಿ ಪರಂಪರೆ ಲೋಕಾರ್ಪಣೆ, ಪತ್ರಿಕಾ ಹಾಗೂ ವೈದ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು. ಶ್ರೀ ಗುರುಬಸವ ಪಟ್ಟದ್ದೇವರು, ಸುಶೀಲಾ ಸಜ್ಜನ್, ಸುರೇಶ ಚನಶೆಟ್ಟಿ, ಅಮಿತಕುಮಾರ ಕುಲಕರ್ಣಿ, ಹಣಮಂತರಾಯ ಕೌಟಗೆ, ಶ್ರೀಕಾಂತ ಅಲ್ಲಾಪುರ, ಪ್ರಶಾಂತ ಮಠಪತಿ ಇತರರಿದ್ದರು.
Published on

ಕಮಲನಗರ: ಯುವ ಲೇಖಕರು ತಮ್ಮ ಪ್ರತಿಭೆ, ಸೃಜನಶೀಲತೆ ಬಳಸಿಕೊಂಡು ಆಸಕ್ತಿಯ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆಯಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಸಾಹಿತಿ ಸಂಗಮೇಶ್ವರ ಮುರ್ಕೆ ಬರೆದ ಬೀದರ್ ಜಿಲ್ಲೆಯ ಸಂಸ್ಕೃತಿ ಪರಂಪರೆ ಲೋಕಾರ್ಪಣೆ, ಪತ್ರಿಕಾ ಹಾಗೂ ವೈದ್ಯ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಯುವ ಸಾಹಿತಿಗಳು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೆ ಸಾಹಿತ್ಯ ಕ್ಷೇತ್ರ ಸಮೃದ್ಧವಾಗಿ ಬೆಳೆಯಲು ಸಾಧ್ಯ. ಬರಹಗಾರರು ಮಾನವೀಯ ಕಾಳಜಿ, ಕಳಕಳಿಯೊಂದಿಗೆ ಸೂಕ್ಷö್ಮ ಸಂವೇದನಾಶೀಲರಾಗಿ ಸಾಹಿತ್ಯ ರಚಿಸಿ ವರ್ತಮಾನದ ವಾರಸುದಾರರಿಗೆ ಮಾರ್ಗದರ್ಶನ ಮಾಡುವಂತಾಗಬೇಕು ಎಂದರು.

ತಾಪಂ ಇಒ ಹಣಮಂತರಾಯ ಕೌಟಗೆ ಮಾತನಾಡಿ, ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಮಾಧ್ಯಮ ರಂಗ ಅಗತ್ಯ. ಸಮಾಜದ ಪರಿಶುದ್ಧತೆಯಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ. ಸಕಾರತ್ಮಕ ವಿಚಾರಗಳಿಗೆ ಪ್ರಾಮುಖ್ಯ ನೀಡುತ್ತಿರುವ ಪತ್ರಿಕೆಗಳಿಂದ ಸಶಕ್ತ ಭಾರತ ನಿರ್ಮಾಣ ಸಾಧ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ನಾಡು-ನುಡಿ ಬೆಳವಣಿಗೆಗೆ ಪತ್ರಕರ್ತರ ಸೇವೆ ಅನನ್ಯ. ಚನ್ನಬಸವ ಪಟ್ಟದ್ದೇವರು ಹುಟ್ಟಿದ ಪುಣ್ಯಭೂಮಿ ಕಮಲನಗರದಲ್ಲಿ ಕಸಾಪ ತಾಲೂಕು ಘಟಕ ಕೈಗೊಳ್ಳುತ್ತಿರುವ ವಿವಿಧ ರಚನಾತ್ಮಕ ಕಾರ್ಯಗಳು ಇತರರಿಗೆ ಮಾದರಿಯಾಗಿದೆ ಎಂದರು.

ಡಾ.ಎಸ್.ಎಸ್.ಮೈನಾಳೆ ಕೃತಿ ಪರಿಚಯ ಮಾಡಿದರು. ಸಿಪಿಐ ಶ್ರೀಕಾಂತ ಅಲ್ಲಾಪುರ, ಸಾಹಿತಿ ಸಂಗಮೇಶ್ವರ ಮುರ್ಕೆ ಮಾತನಾಡಿದರು. ಶ್ರೀ ಮಹಾಲಿಂಗ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಿದ್ದರು. ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು. ಜೀ ಕನ್ನಡ ನ್ಯೂಜ್ ವರಿದಿಗಾರ ಅನೀಲಕುಮಾರ ದೇಶಮುಖ ಅವರನ್ನು ವಿಶೇಷ ಸನ್ಮಾನಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುನೀಲ ಕಸ್ತೂರೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್, ಶಿವಶಂಕರ ಟೋಕರೆ, ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಮಂತ ಮಡಿವಾಳ, ಪಂಢರಿ ಆಡೆ, ಡಾ.ಅಶೋಕುಮಾರ ಮಳಗೆ, ಚನ್ನಬಸವ ಘಾಳೆ, ಸತೀಶ ಜೀರ್ಗೆ, ಧನರಾಜ ಸೊಲ್ಲಾಪುರೆ, ನಾಗಯ್ಯ ಸ್ವಾಮಿ, ಶಿವಾನಂದ ವಡ್ಡೆ, ಜಗನ್ನಾಥ ಜೀರ್ಗೆ, ಧನರಾಜ ಭವರಾ, ಉಮೇಶ ಜೀರ್ಗೆ, ಸಂತೋಷ ಸುಲಾಕೆ, ಅವಿನಾಶ ಶಿವಣಕರ, ರಾಜಕುಮಾರ ಬಿರಾದಾರ, ಬಾಲಾಜಿ ಬಿರಾದಾರ ಇತರರಿದ್ದರು.

ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಸ್ವಾಗತಿಸಿದರು. ಹಾವಗಿರಾವ ಮಠಪತಿ ನಿರೂಪಣೆ ಮಾಡಿದರು. ತಾಲೂಕಿನ ಪತ್ರಕರ್ತರು ಹಾಗೂ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಲ್ಲ ಕೃತಿಗಳ ಆಶಯ ಸತ್ಯದ ಅನ್ವೇಷಣೆ ಆಗಬೇಕು. ಆಗ ಮಾತ್ರ ಅದು ಸಮಾಜವನ್ನು ಸ್ಪಂದಿಸುತ್ತದೆ. ಸತ್ಯದ ಅನ್ವೇಷಣೆ ಆದಾಗ ವೈಚಾರಿಕ, ಸಾಮಾಜಿಕ ಮೌಲ್ಯಗಳ ಚಿಂತನೆ ಬೆಳೆಸಲು ಸಾಧ್ಯ. ಉತ್ತಮ ಸಾಹಿತ್ಯ ಕೃತಿ ರಚನೆಗೆ ಅನುಭವ ಬೇಕು. ಅನುಭಾವದ ಅಕ್ಷರ ರೂಪವೇ ಸಾಹಿತ್ಯ. ಲೇಖಕ ಅನುಭವಗಳನ್ನು ಪಡೆದು ಅದರ ನೆಲೆಗಟ್ಟಿನಲ್ಲಿ ಸಾಹಿತ್ಯ ರಚಿಸಬೇಕು.

| ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ ಭಾಲ್ಕಿ ಹಿರೇಮಠ ಸಂಸ್ಥಾನ

ಸರ್ಕಾರ ಹಾಗೂ ಸಮಾಜದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಜನರ ಧ್ವನಿಯನ್ನು ಆಡಳಿತ ವರ್ಗಕ್ಕೆ ಹಾಗೂ ಜನಪ್ರತಿನಿಧಿಗಳ ಕಿವಿಗೆ ತಲುಪಿಸುವ ಸಂದೇಶ ವಾಹಕ ಕೆಲಸ ಮಾಡುತ್ತಿದೆ. ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ಪತ್ರಕರ್ತರು ಹಾಗೂ ವೈದ್ಯರು, ಪೊಲೀಸರ ಜತೆಗೆ ಕೋವಿಡ್ ವಾರಿಯರ್ಸ್ಗಳಾಗಿ ತಮ್ಮ ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸಿದ್ದು ಮರೆಯಲಾಗದು.

| ಸುರೇಶ ಚನಶೆಟ್ಟಿ  ಕಸಾಪ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net