

ಪವನ ದೇಶಪಾಂಡೆ ಕೊಡೇಕಲ್: ಇತ್ತೀಚಿನ ವರ್ಷಗಳಲ್ಲಿ ರೈತರು ಕೃಷಿಯಲ್ಲಿ ಬದಲಾವಣೆ ಮಾಡಿ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಅದರಲ್ಲೂ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಬಹುದಾದ ತೋಟಗಾರಿಕೆ ಬೆಳೆ ಬೆಳೆಯಲು ಉತ್ಸುಕತೆ ತೋರುತ್ತಿದ್ದಾರೆ. ಅದರಂತೆ ಗ್ರಾಮದ ಯುವ ರೈತ ವಿದೇಶಿ ತಳಿಯ ಡ್ರ್ಯಾಗನ್ ಫ್ರೂಟ್ ಬೆಳೆದು ಸಾಕಷ್ಟು ಆದಾಯದ ನಿರೀಕ್ಷೆಯಲ್ಲಿದ್ದಾನೆ.
ಹೋಬಳಿ ವಲಯದಲ್ಲಿ ಕೆಲವು ರೈತರು ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಸಪೋಟ, ಪಪ್ಪಾಯಿ ಇತರ ಬೆಳೆಯುತ್ತಿರುವ ನಡುವೆ ಯುವ ರೈತ ಮಲ್ಲಪ್ಪ ನವಲಗುಡ್ಡ ಡ್ರ್ಯಾಗನ್ ಬೆಳೆದು ಸೈ ಎನಿಸಿಕೊಂಡಿದ್ದಾನೆ.
ಮೂರು ಎಕರೆ ಜಮೀನಿನಲ್ಲಿ ೧೬೦೦ ಕೆಂಪು ತಳಿಯ ಡ್ರ್ಯಾಗನ್ ಸಸಿ ನಾಟಿ ಮಾಡಿದ್ದು, ಸಮೃದ್ಧವಾಗಿ ಬೆಳೆದು ಇದೀಗ ಹಣ್ಣು ಬಿಡಲಾರಂಭಿಸಿದೆ. ಒಳ್ಳೆಯ ಇಳುವರಿ ನಿರೀಕ್ಷೆ ಇದೆ. ಒಂದು ವರ್ಷದಲ್ಲಿಯೇ ಹಣ್ಣು ಕೊಡಲು ಆರಂಭಿಸಿದ್ದು, ಮೊದಲು ಕಟಾವು ಮಾಡಿ ಸಂಬಂಧಿಕರು, ಗೆಳೆಯರಿಗೆ ಕೊಟ್ಟಿದ್ದೇನೆ. ಇದೀಗ ಎರಡನೇ ಸಲ ಬಂದಿರುವ ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದಾಗಿ ಹೇಳುತ್ತಾರೆ ರೈತ ಮಲ್ಲಪ್ಪ.
ಒಂದು ಹಣ್ಣು ೪೦೦-೫೦೦ ಗ್ರಾಂ ತೂಕವಿರುತ್ತದೆ. ಡ್ರ್ಯಾಗನ್ ಹಣ್ಣು ಬಿಳಿ ಪಿಂಕ್‌ಗೆ ಹೋಲಿಸಿದರೆ ನವಲಗುಡ್ಡ ಬೆಳೆದಿರುವ ರೆಡ್ ಡ್ರ್ಯಾಗನ್ ಹಣ್ಣು ಗಾತ್ರದಲ್ಲಿ ದೊಡ್ಡದಾಗಿರುವುದಲ್ಲದೆ ಸಿಹಿಯೂ ಇದೆ. ಪ್ರತಿ ೧೫ ದಿನಕ್ಕೊಮ್ಮೆ ಹಣ್ಣು ಬಿಡುತ್ತಿದೆ. ಈಗಾಗಲೇ ಎರಡು ಬಾರಿ ಹಣ್ಣು ಕಟಾವು ಮಾಡಿದ್ದು, ಸ್ಥಳೀಯ ವ್ಯಾಪಾರಸ್ಥರು ಸೇರಿ ದೂರದ ಪಟ್ಟಣಗಳಿಂದಲೂ ಬಂದು ಕೆಜಿಗೆ ೧೦೦ ರೂ.ಗಳಂತೆ ಖರೀದಿಸುತ್ತಿದ್ದಾರೆ.
ಖರ್ಚು ತುಂಬ ಕಡಿಮೆ: ಡ್ರ್ಯಾಗನ್ ಬೆಳೆಯಲು ಖರ್ಚು ಮತ್ತು ನಿರ್ವಹಣೆಯೂ ತುಂಬಾ ಕಡಿಮೆ. ಎಂತಹ ಭೂಮಿಯಲ್ಲಾದರೂ ಬೆಳೆಯಬಹುದು. ಕಡಿಮೆ ನೀರಿದ್ದರೂ ೨೦-೨೫ ವರ್ಷ ಫಲ ಕೊಡುತ್ತದೆ. ಮಳೆಗಾಲದಲ್ಲಿ ನೀರು ಹೆಚ್ಚಾದರೆ ಕೋಲೆ ರೋಗ ಬರುವ ಸಾಧ್ಯತೆಗಳಿದ್ದು, ಆ ಸಮಯದಲ್ಲಿ ನಿಗಾ ವಹಿಸಿದರೆ ಉತ್ತಮ ಇಳುವರಿ ಬರುವುದು ಖಚಿತ.
ಈ ಭಾಗದ ಭೂಮಿಗಳಲ್ಲಿ ಡ್ರ್ಯಾಗನ್ ಬೆಳೆ ಸರಿಯಾಗಿ ಬೆಳೆಯುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೂ ಧೈರ್ಯ ಮಾಡಿ ಬೆಳೆದಿದ್ದು, ಉತ್ತಮ ಇಳುವರಿ ಪಡೆಯುವ ನಿರೀಕ್ಷೆ ಇದೆ. ಕಡಿಮೆ ಖರ್ಚಿನಲ್ಲಿ ಬೆಳೆಯುವ ಡ್ರ್ಯಾಗನ್ ರೈತರಿಗೆ ವರದಾನವಾಗಿದೆ.
| ಮಲ್ಲಪ್ಪ ನವಲಗುಡ್ಡ ಡ್ರ್ಯಾಗನ್ ಬೆಳೆದ ರೈತ ಕೊಡೇಕಲ್
ಇಲಾಖೆಯಿಂದ ದ್ರಾಕ್ಷಿ, ದಾಳಿಂಬೆ, ಸೀತಾಫಲ, ಮಾವು, ಡ್ರ್ಯಾಗನ್ ಇತರ ಬೆಳೆಗಳಿಗೆ ಶೇ.೫೦ ಸಬ್ಸಿಡಿ ನೀಡಲಾಗುತ್ತದೆ. ತೋಟಗಾರಿಕೆ ಬೆಳೆಗಳಿಂದ ಉತ್ತಮ ಲಾಭವಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು.
| ಸಂತೋಷ ಶೇಷಲು ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ಸುರಪುರ