

ಚಾಮರಾಜನಗರ: ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಯುವಕರು ಮಾಜಿ ರಾಜ್ಯಪಾಲ ದಿವಂಗತ ಬಿ.ರಾಚಯ್ಯರಂತಹ ಆದರ್ಶ ವ್ಯಕ್ತಿಗಳ ಇತಿಹಾಸವನ್ನು ಅಧ್ಯಯನ ಮಾಡಿದಾಗ ಶ್ರೇಷ್ಠ ರಾಜಕಾರಣಿಯಾಗಿ, ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡಲು ಸಾಧ್ಯ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಋಗ್ವೇದಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಿ. ರಾಚಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿ.ರಾಚಯ್ಯ ಕರ್ನಾಟಕ ಕಂಡ ಶ್ರೇಷ್ಠ ರಾಜಕೀಯ ದಿಗ್ಗಜರು. ಸುಮಾರು 40 ವರ್ಷಗಳ ನಿರಂತರ ಆಡಳಿತವನ್ನು ರಾಚಯ್ಯ ನಡೆಸಿದ್ದಾರೆ. ಜ್ಞಾನಿಗಳಾಗಿ, ಕ್ರೀಡಾಪಟುವಾಗಿ,. ರೈತರಾಗಿ, ಪ್ರಗತಿಪರ ಚಿಂತನಾಶೀಲ, ಅಭಿವೃದ್ಧಿ ಪರ ದೃಷ್ಟಿಕೋನವನ್ನು ಬೆಳೆಸಿಕೊಂಡ ರಾಚಯ್ಯನವರು ರಾಜಕಾರಣದಲ್ಲಿ ತಮ್ಮ ಜ್ಞಾನ ,ತಾಳ್ಮೆ, ಸಹನೆ ಅಭಿವೃದ್ಧಿ ಮತ್ತು ನಂಬಿಕೆಗೆ ಹೆಸರಾಗಿದ್ದರು ಎಂದರು.
ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ಶ್ರೀನಿವಾಸ್‌ಗೌಡ ಮಾತನಾಡಿ, ರಾಚಯ್ಯನವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆಯ ಮೂಲಕ ಶ್ರಮಿಸಿದ ಮಹಾನ್ ವ್ಯಕ್ತಿ. ಜಿಲ್ಲೆಯ ನೀರಾವರಿ, ಕೈಗಾರಿಕೆ, ಶಿಕ್ಷಣ, ರಸ್ತೆ ಉದ್ಯೋಗ ಸೃಷ್ಟಿ, ರೇಷ್ಮೆ ಹಾಗೂ ಅಭಿವೃದ್ಧಿಯ ಹರಿಕಾರರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ನೂರಾರು ಕಾರ್ಯಗಳು ಎಂದಿಗೂ ಅವರನ್ನು ಜೀವಂತವಾಗಿ ಇಡುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯೆ ಪದ್ಮ ಪುರುಷೋತ್ತಮ್ ಮಾತನಾಡಿ, ರಾಚಯ್ಯ ಅವರು ಸಜ್ಜನರು , ಸರಳ ಹಾಗು ಅಪಾರ ಗೌರವಾನ್ವಿತ ವ್ಯಕ್ತಿತ್ವ ದವರು. ಕನ್ನಡ ಸಾಹಿತ್ಯ ಪರಿಷತ್ತು ಇವರ ಕೊಡುಗೆಗಳನ್ನು ಕುರಿತು ಕಾರ್ಯಕ್ರಮ ರೂಪಿಸುವುದು ಬಹಳ ಒಳ್ಳೆಯ ಅರ್ಥಗರ್ಭಿತವಾದ ಕಾರ್ಯಕ್ರಮವಾಗಿದೆ ಎಂದರು. ಕನ್ನಡ ಚಳುವಳಿಗಾರ ರಾಜಗೋಪಾಲ್ ರಾಜಯ್ಯನವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಗೌರವಿಸಿದರು. ಪಣ್ಯದಹುಂಡಿ ರಾಜು, ರವಿಚಂದ್ರಪ್ರಸಾದ್ ಕಹಳೆ, ಬಿ.ಕೆ ಆರಾಧ್ಯ, ಶಿವಲಿಂಗಮೂರ್ತಿ, ಸರಸ್ವತಿ, ಹೊನ್ನೂರು ಪುಟ್ಟಸ್ವಾಮಿ, ರಾಮಸಮುದ್ರದ ಮಂಜುನಾಥ್, ನಂಜುಂಡ ಶೆಟ್ಟಿ, ಮಲ್ಲಣ್ಣ ಇತರರು ಇದ್ದರು.