

ದೇವದುರ್ಗ: ವಚನ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯವಾಗಿದ್ದು ಸರ್ವಕಾಲಕ್ಕೂ ಮಾನವನ ಬದುಕಿನ ದಾರಿ ದೀಪವಾಗಿದೆ. ವಚನಗಳಲ್ಲಿ ಮಾನವೀಯ ಮೌಲ್ಯ ಹಾಗೂ ವ್ಯಕ್ತಿತ್ವದ ಆದರ್ಶಗಳನ್ನು ಕಾಣಬಹುದು ಎಂದು ಪ್ರಾಧ್ಯಾಪಕ ಮುನಿಯಪ್ಪ ನಾಗೋಲಿ ಹೇಳಿದರು.
ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಕಸಾಪ, ಸಂಗೀತ ಶಿಕ್ಷಕರ ಬಳಗದಿಂದ ಆಯೋಜಿಸಿದ್ದ ಪಂ.ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ, ದತ್ತಿ ಉಪನ್ಯಾಸ ಹಾಗೂ ಸಂಗೀತ ಉತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಯುವ ಬರಹಗಾರರು ಅಧ್ಯಯನ ಮಾಡಬೇಕು. ವಚನ ಸಾಹಿತ್ಯ ಉಳಿಸಿದ ಕೀರ್ತಿ ಡಾ.ಫ.ಗು.ಹಳಕಟ್ಟಿಗೆ ಸಲ್ಲುತ್ತದೆ ಎಂದರು.
ಪ್ರಾಚಾರ್ಯ ಶರಣಬಸಯ್ಯ ಹಿರೇಮಠ ಮಾತನಾಡಿ, ಪಂ.ಪಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರದ ದಿಗ್ಗಜರು. ನಾಡಿನಾದ್ಯಂತ ಅನೇಕ ಶಿಷ್ಯ ಬಳಗವನ್ನು ಹೊಂದಿದ್ದಾರೆ. ಗವಾಯಿಗಳ ಸಂಗೀತ ಸೇವೆ ಅಮೋಘ ಮತ್ತು ಅವಿಸ್ಮರಣಿಯವಾಗಿದೆ. ಇಂಥ ವ್ಯಕ್ತಿಗಳ ಪುಣ್ಯಸ್ಮರಣೆ ಮಾಡುವುದು ಅರ್ಥಪೂರ್ಣವಾಗಿದೆ. ಸಂಗೀತ ಗಂಧರ್ವ ವಿದ್ಯೆಯಾಗಿದ್ದು, ಅದನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಕಲಿಯಬೇಕು. ಸಂಗೀತವನ್ನು ಉಳಿಸುವುದು ಹಾಗೂ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡ ಭಾಷಾಭಿಮಾನವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.
ಸಾಧಕರಾದ ಚಿತ್ರಕಲೆ ಕಲಾವಿದ ಮಹಾಮುನಿ, ತಬಲ ವಾದಕ ಈರಣ್ಣ ಹೂಗಾರ, ಯತೀಶ್ ಮಠಪತಿ, ಪಂ.ಮಾರುತಿ ಗವಾಯಿ, ಹೂನ್ನಲಿಂಗ ರುದ್ರಾಕ್ಷಿ, ಶರಣಬಸಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ನಾಗರೆಡ್ಡಿ ಹೂಗಾರ್, ಭೀಮಣ್ಣ ಭಜಂತ್ರಿ, ಹನುಮಯ್ಯ ಪಿಲಿಗುಂಡ, ಮಾರುತಿ ಗವಾಯಿ, ಶರಣ ಬಸಯ್ಯ ಹಿರೇಮಠ ಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಿತು.