

ತುಮಕೂರು: ಆಧುನಿಕ ಬದುಕಿನಲ್ಲಿ ತಂತ್ರಜ್ಞಾನ ಭರಾಟೆ ಗುರುಪರಂಪರೆ, ಆಚಾರ, ಸಂಸ್ಕಾರ, ಸಂಸತಿ ಮರೆಯಾಗಿಸುತ್ತಿದೆ. ಹೆತ್ತವರನ್ನು ರ್ನಿಲಕ್ಷ$್ಯ ಮಾಡುವಂತಾಗಿರುವ ಯುವ ಪೀಳಿಗೆಗೆ ಸಂಸ್ಕಾರದ ಅಗತ್ಯವಿದ್ದು, ಗುರು, ಹಿರಿಯರು ಇಂತಹ ಕೆಲಸದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಬೆಳ್ಳಾವಿ ಕಾರದ ಮಠದ ಶಿವಯೋಗಿ ಕರ್ತೃ ಗದ್ದುಗೆ ಲೋಕಾರ್ಪಾಣೆ ಕಾರ್ಯಕ್ರಮಲ್ಲಿ ಭಾಗವಹಿಸಿ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟಿದ್ದೇವೆ ಆದರೆ, ಇದರೊಂದಿಗೆ ನಮ್ಮ ಸಂಸ್ಕಾರ ಕೊಡುವುದರಲ್ಲಿ ವಿಫಲವಾಗಿದ್ದೆವೆ. ಈಗಲೂ ಕಾಲ ಮಿಂಚಿಲ್ಲ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲು ಎಲ್ಲರೂ ಪ್ರಯತ್ನಿಸೋಣ ಎಂದರು. ದೇಶದ ಪ್ರಧಾನಿ ನರೇಂದ್ರಮೋದಿ ಅವರು ದೇಶದ ಅಭಿವೃದ್ಧಿ ಕನಸು ಕಾಣುತ್ತ ಯುವಜನರ ಮೇಲೆ ವಿಶ್ವಾಸವಿಟ್ಟಿದ್ದಾರೆ. ಬೇರೆ ದೇಶಗಳಲ್ಲಿ ಹಿಂದೆಲ್ಲ ಭಾರತೀಯರನ್ನು ಭಿಕ್ಷುಕರಂತೆ ಕಾಣುತ್ತಿದ್ದರು. ಆದರೆ, ಇಂದು ಭಾರತೀಯ ಯಾವುದೇ ದೇಶಕ್ಕೆ ಹೋದರೂ ತಲೆಯೆತ್ತಿ ನಡೆಯುವಂತೆ ಆಗಿದೆ. ಪ್ರತಿಯೋಬ್ಬರಿಗೆ ಗೌರವ ಸಿಗುತ್ತಿದೆ ಇದಕ್ಕೆಲ್ಲ ನಮ್ಮ ಹೆಮ್ಮೆಯ ಪ್ರಧಾನಿ ಕಾರಣ ಎಂದರು.
ಬಿ.ಎಸ್.ಯಡಿಯೂರಪ್ಪ ಅವರಿಗೆ ಕಷ್ಟ ಬಂದಾಗಲೆಲ್ಲ ಅವರ ಜತೆಯಲ್ಲಿ ನಿಂತು ಮಾರ್ಗದರ್ಶನ ಮಾಡಿದ್ದು ನಾಡಿದ ಮಠಾಧೀಶರು. ಎಷ್ಟೇ ಅಡೆ, ತಡೆ ಬಂದರೂ ನಾಡಿನ ಕೆಲಸವನ್ನು ಯಡಿಯೂರಪ್ಪನವರು ಮಾಡಿದ್ದರು. ನಾನು ಕೂಡ ಅದೇ ರೀತಿಯಲ್ಲಿ ಕೆಲಸ ಮಾಡುವ ಪ್ರಯತ್ನ ಮಾಡುತಿದ್ದೇನೆ. ಜೀವನದಲ್ಲಿ ಸೋಲು ಬಂದಾಗ ನಿಮ್ಮವರು ಯಾರು ಅಂತಾ ಗೊತ್ತಾಗುತ್ತೆ, ಯಡಿಯೂರಪ್ಪ ಏನೇ ಸವಾಲು ಬಂದರೂ ಕೂಡ ಬೆನ್ನು ತೋರಿಸಲಿಲ್ಲ. ಮಠ ಮಾನ್ಯಗಳಿಗೆ ಆರ್ಥಿಕವಾಗಿ ಶಕ್ತಿ ತುಂಬಿದ್ದರು ಎಂದು ಸ್ಮರಿಸಿದರು.
ಕಾರದ ಮಠದ ಕರ್ತೃ ಗದ್ದುಗಗೆ ಪೂಜೆ ಸಲ್ಲಿಸಿದ ಗೃಹ ಸಚಿವ ಡಾ.ಪರಮೇಶ್ವರಗೆ ಕಾರದ ವೀರಬಸವ ಶ್ರೀಗಳು ಆಶೀರ್ವದಿಸಿದರು. ಕರ್ತೃ ಗದ್ದುಗೆ ಲೋಕಾರ್ಪಣೆ ದಿನದಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗೆ ಅಕ್ಷತೆ ಹಾಕಿ ಪರಮೇಶ್ವರ ಆಶೀರ್ವದ ಮಾಡಿದರು. ಭಾನುವಾರ ಬೆಳಗ್ಗೆ 108 ಶಿವಲಿಂಗಗಳ ಸಹಿತ ಮಹಾಗಣಪತಿ, ನಂದೀಶ್ವರ ಸ್ವಾಮಿಗೆ ಪ್ರಾಣ ಪ್ರತಿಷ್ಠಾನ, ಲಘುನ್ಯಾಸ ಪೂರ್ವಕ ರುದ್ರಾಭಿಷೇಕ ಮುಂತಾದ ಕಾರ್ಯಕ್ರಮಗಳು ವಿವಿಧ ಮಠಗಳ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಜರುಗಿದವು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರ ಜತೆಯಲ್ಲಿ ಶಾಸಕರಾದ ಬಿ.ಸುರೇಶ್ಗೌಡ, ಜಿ.ಬಿ.ಜ್ಯೋತಿಗಣೇಶ್, ಚಿದಾನಂದಗೌಡ, ಹೆಬ್ಬಾಕ ರವಿ, ಡಾ.ಎಂ.ಆರ್.ಹುಲಿನಾಯ್ಕರ್, ವೈ.ಎಚ್.ಹುಚ್ಚಯ್ಯ, ಟಿ.ಆರ್.ಸದಾಶಿವಯ್ಯ ಮತ್ತಿತರರು ಇದ್ದರು.
ಇತಿಹಾಸ ಅರಿಯೋಣ: ಕರ್ತೃ ಗದ್ದುಗೆಯ ಕಲಶ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಪ್ರಸ್ತುತ ಸನ್ನಿವೇಶದಲ್ಲಿ ನಮಗೆ ವಿಶ್ವವಿದ್ಯಾಲಯಗಳಿಗಿಂತ ಗುರು, ಪರಂಪರೆ ಬೇಕಿದೆ. ಬಗವಾನ್ ಬುದ್ಧ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ವಿಶ್ವ ಗುರು ಬಸವಣ್ಣ ಅವರು ತಿಳಿಸಿದ ವಿಚಾರಧಾರೆಯ ಅನುಸರಣೆಯ ಅಗತ್ಯವಿದೆ ಎಂದರು. ಬಸವಣ್ಣನ ಮೂರ್ತಿಯನ್ನು ಲಂಡನ್ನ ಥೇಮ್ಸ್ ನದಿಯ ದಂಡೆಯಲ್ಲಿ ಕಟ್ಟಿದ್ದಾರೆ. ಅದಕ್ಕೆ ನಾನೂ ಮತ್ತು ಯಡಿಯೂರಪ್ಪ ಸಹಾಯ ಮಾಡಿದ್ದೇವೆ. ಬಸವಣ್ಣನ ತತ್ವ ಸಾರಲು ನಾನೂ ಕೂಡ ಸಹಾಯ ಮಾಡಿದ್ದೇನೆ. ಸಮಾಜಕ್ಕೆ, ಮನುಕುಲಕ್ಕೆ ಸಮಾನತೆಯ ತತ್ವ ಸಾರಿರ ಅಣ್ಣ ಬಸವಣ್ಣನ ತತ್ವ ಲಂಡನ್ನಲ್ಲಿ ಪ್ರಚಾರ ಆಗುತ್ತಿದೆ ಎಂದರು. ನಾವೆಲ್ಲರೂ ನಮ್ಮ ಇತಿಹಾಸವನ್ನೇ ಮರೆಯುತಿದ್ದೇವೆ. ಯುವಜನರು ಈ ಬಗ್ಗೆ ಗಮನ ಹರಿಸಬೇಕಿದೆ. ಬಸವಣ್ಣನವರು ಸಮಾಜಕ್ಕೆ ಸಾರಿದ ಸಮಾನತೆಯನ್ನ ಅಂಬೇಡ್ಕರ್ ಸಂವಿಧಾನದ ಮೊದಲ ಪುಟದಲ್ಲೇ ಬರೆದಿದ್ದಾರೆ. ವಿಶ್ವದಲ್ಲಿ ಮೊದಲ ಪಾರ್ಲಿಮೆಂಟ್ ನಮ್ಮ ಕೂಡಲ ಸಂಗಮದಲ್ಲಿ ಅನುಭವ ಮಂಟಪದ ಮೂಲಕ ನಡೆಯಿತು. ನಮಗೆ ಬೇಕಿರುವುದು ಪದವಿಗಳಲ್ಲ, ಸಮಾನತೆ ಹಾಗೂ ಭ್ರಾತೃತ್ವ ಎಂದರು.
ರಾಜಕೀಯ ಗುರು ಯಡಿಯೂರಪ್ಪ: ಇಡೀ ಸಮಾಜವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವುದರ ಜತೆಗೆ ಮಠಾಮಾನ್ಯಗಳಿಗೆ ಯಡಿಯೂರಪ್ಪ ಶಕ್ತಿ ತುಂಬಿದ್ದರು. ನನ್ನ ಗುರಿ ಸ್ಪಷ್ಟವಾಗಿದೆ. ನನಗೆ ರಾಜಕೀಯ ಗುರು ಯಡಿಯೂರಪ್ಪನವರೇ. ಅಂತೆಯೇ, ಏನೇ ಕಷ್ಟ ಬಂದರೂ ಪರಮಪೂಜ್ಯರ ಆಶೀರ್ವಾದ ಬೇಕಿದೆ, ಪೂಜ್ಯರ ಆಶೀರ್ವಾದ ಇರಲಿ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.