

ಹಾಸನ: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಯುವ ನಿಧಿ ಯೋಜನೆ ಜಿಲ್ಲೆಯಲ್ಲಿ ಶೇ. 82 ರಷ್ಟು ಪ್ರಗತಿ ಸಾಧಿಸಿದೆ.
ಪದವೀಧರ ಹಾಗು ಡಿಪ್ಲೋಮಾ ನಿರುದ್ಯೋಗಿಗಳಿಗೆ ಕೆಲಸ ಸಿಗುವವರೆಗೆ ಆರ್ಥಿಕವಾಗಿ ಆಸರೆಯಾಗಲು ರಾಜ್ಯ ಸರ್ಕಾರ ಏಳು ತಿಂಗಳ ಹಿಂದೆ ಜಾರಿಗೊಳಿಸಿದ ಯುವ ನಿಧಿಯ ಪ್ರಯೋಜನಕ್ಕಾಗಿ ಜಿಲ್ಲೆಯ 4486 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು ಇದುವರೆಗೆ 3151 ಜನರ ಖಾತೆಗೆ ಹಣ ಪಾವತಿಯಾಗಿದೆ. ಅದರಲ್ಲಿ 1738 ಯುವತಿಯರು ಹಾಗು 1413 ಹುಡುಗರಿದ್ದಾರೆ. ಹೊಸ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಹ ಜಾರಿಯಲ್ಲಿದೆ.
2022-23ನೇ ಸಾಲಿನಲ್ಲಿ ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೆ ಪದವೀಧರರಿಗೆ 3 ಸಾವಿರ ರೂ., ಡಿಪ್ಲೋಮಾ ಮುಗಿಸಿದವರಿಗೆ ಮಾಸಿಕ 1500 ರೂ. ಸಂದಾಯವಾಗುತ್ತಿದೆ. ಶೇ. 100 ರಷ್ಟು ಗುರಿ ಸಾಧಿಸಲು ಸರ್ಕಾರದ ನಿರ್ದೇಶನವಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಜಿಲ್ಲೆಯ 61 ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಮಾಹಿತಿ ಪಡೆದು ಯುವ ನಿಧಿಗೆ ಅರ್ಜಿ ಸಲ್ಲಿಸುವಂತೆ ಕ್ರಮ ವಹಿಸಲಾಗಿದೆ. ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯ 7897 ಜನರು ಪದವಿ ಹಾಗು ಡಿಪ್ಲೋಮಾ ಕೋರ್ಸ್ ಮುಗಿಸಿದ್ದಾರೆ. ಅದರಲ್ಲಿ 1844 ಜನರು ಉನ್ನತ ವ್ಯಾಸಂಗಕ್ಕೆ ಸೇರಿದ್ದಾರೆ. 601 ಜನರು ಉದ್ಯೋಗ ಮಾಡುತ್ತಿರುವುದರಿಂದ ಯೋಜನೆಯಿಂದ ಹೊರಗುಳಿದಿದ್ದಾರೆ. ಇನ್ನು 966 ಜನರು ಯುವ ನಿಧಿಗೆ ಅರ್ಜಿಯನ್ನೇ ಸಲ್ಲಿಸಿಲ್ಲ.
ಮಾನದಂಡಗಳೇನು ?
ಸರ್ಕಾರ ಪ್ರತಿ ತಿಂಗಳು ನೀಡುವ 3 ಸಾವಿರ ರೂ. ಪ್ರೋತ್ಸಾಹ ಧನಕ್ಕೆ ಅರ್ಹರಾಗಬೇಕೆಂದರೆ ಸರ್ಕಾರ ಕೆಲವು ನಿಯಮಗಳನ್ನು ರೂಪಿಸಿದೆ. ಪದವಿ ಅಥವಾ ಡಿಪ್ಲೋಮಾ ಕೋರ್ಸ್ ಮುಗಿಸಿ 6 ತಿಂಗಳಾಗಿರಬೇಕು. ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದಿರಬಾರದು. ಆರು ವರ್ಷಗಳ ಕಾಲ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರಬೇಕು ಹಾಗು ಆರು ವರ್ಷದಿಂದ ಕರ್ನಾಟಕದಲ್ಲೇ ವಾಸವಿರಬೇಕು. ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಆಧಾರ್ ಹಾಗು ಮೊಬೈಲ್ ನಂಬರ್ ಜೋಡಣೆ ಆಗಿರಬೇಕು ಎಂದು ನಿಯಮ ಜಾರಿಗೊಳಿಸಲಾಗಿದೆ.
ಸ್ವಯಂ ದೃಢೀಕರಣ ಕಡ್ಡಾಯ:
ಸೇವಾ ಸಿಂಧು ಪೋರ್ಟಲ್ ಮೂಲಕ ಯುವ ನಿಧಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರತಿ ತಿಂಗಳ 12 ರಿಂದ 20ರ ಒಳಗೆ ಹಣ ಸಂದಾಯವಾಗುತ್ತದೆ. ಸರ್ಕಾರದ ಸದುಪಯೋಗ ಪಡೆಯುತ್ತಿರುವವರು ಯಾವುದಾದರು ನೌಕರಿಗೆ ಸೇರಿದರೆ ಅಂತವರು ಆನ್‌ಲೈನ್‌ಲ್ಲೇ ತಮ ನೋಂದಣಿ ರದ್ದುಪಡಿಸಬೇಕು. ಇಲ್ಲವೆಂದರೆ ದಂಡ ವಿಧಿಸಲಾಗುತ್ತದೆ. ಯಾವುದೇ ನೌಕರಿ ಇಲ್ಲದೆ ನಿರುದ್ಯೋಗಿ ಆಗಿಯೇ ಇದ್ದರೆ ಪ್ರತಿತಿಂಗಳ 25ರ ಒಳಗೆ ಯಾವ ನೌಕರಿ ಮಾಡುತ್ತಿಲ್ಲವೆಂದು ಸ್ವಯಂ ದೃಢೀಕರಣ ಮಾಡಿಕೊಳ್ಳಬೇಕು. ಇದನ್ನು ಮಾಡದೆ ಇದ್ದರೆ ಅಂತವರಿಗೆ ನಂತರದ ತಿಂಗಳ ಯುವ ನಿಧಿ ಹಣ ಜಮೆಯಾಗುವುದಿಲ್ಲ.
ಅರ್ಜಿ ಸಲ್ಲಿಸದವರಿಗೆ ಮಾಹಿತಿ:
ಸರ್ಕಾರದ ಸವಲತ್ತು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಬೇಕೆನ್ನುವುದು ಜಿಲ್ಲಾಡಳಿತದ ಉದ್ದೇಶವಾಗಿದ್ದು ಇದುವರೆಗೆ ಅರ್ಜಿ ಸಲ್ಲಿಸದ 966 ಜನರ ಸಂಪರ್ಕ ಸಂಖ್ಯೆ ಪಡೆದು ನೋಂದಣಿ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲರಿಂದಲೂ ಅರ್ಜಿ ಹಾಕಿಸಲಾಗುವುದೆಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ನೋಂದಣಿ ಮಾಡಿಕೊಂಡಿರುವ ಕೆಲವರಿಗೆ ಹಣ ಪಾವತಿಯಾಗದೆ ಇರುವದ ಪ್ರಕರಣಗಳೂ ಇದ್ದು, ತಾಂತ್ರಿಕ ಸಮಸ್ಯೆ ಪರಿಹಾರ ಕಾರ್ಯವೂ ನಡೆಯುತ್ತಿದೆ.
ಯುವ ನಿಧಿ ಆರಂಭವಾದ ಮೊದಲ ಕಂತಿನಲ್ಲಿ ಜಿಲ್ಲೆಯ 91 ಪದವೀಧರರಿಗೆ ಹಣ ಸಂದಾಯವಾಗಿತ್ತು. ಈಗ ಫಲಾನುಭವಿಗಳ ಸಂಖ್ಯೆ 3151ಕ್ಕೆ ಏರಿಕೆಯಾಗಿದೆ. ನಿರುದ್ಯೋಗಿ ಯುವಕ-ಯುವತಿಯರು ಪ್ರತಿ ತಿಂಗಳು ಸ್ವಯಂ ದೃಢೀಕರಣ ಮಾಡಿಕೊಳ್ಳುವ ಮೂಲಕ ಹಣ ಪಡೆಯಬೇಕು.
-ಸಿ.ಬಿ.ಮಂಜುನಾಥ್, ಪ್ರಭಾರ ಜಿಲ್ಲಾ ಉದ್ಯೋಗಾಧಿಕಾರಿ
ಯುವ ನಿಧಿ ಅರ್ಜಿ ಸಲ್ಲಿಸಿದವರ ವಿವರ
ತಾಲ್ಲೂಕು ನೋಂದಣಿ ಸಂಖ್ಯೆ
ಆಲೂರು 187
ಅರಕಲಗೂಡು 511
ಅರಸೀಕೆರೆ 754
ಬೇಲೂರು 475
ಚನ್ನರಾಯಪಟ್ಟಣ 731
ಹೊಳೆನರಸೀಪುರ 456
ಸಕಲೇಶಪುರ 230
ಹಾಸನ 1142