ಯುವ ದಸರಾದಲ್ಲಿ ಅರ್ಜುನ್ ಜನ್ಯ ಸಂಗೀತಕ್ಕೆ ಕುಣಿದ ಕುಪ್ಪಳಿಸಿದ ಪ್ರೇಕ್ಷಕರು

mysore
Published on

ಮಂ

ಜುನಾಥ ತಿಮ್ಮಯ್ಯ ಮೈಸೂರು

ರಂಗುರಂಗಿನ ವೇದಿಕೆಯಲ್ಲಿ ಅರ್ಜುನ್ ಜನ್ಯ ಗಾನಲಹರಿಯ ಮೋಡಿ, ಲಂಗೋರಿ ಬ್ಯಾಂಡ್‌ನ ಅಬ್ಬರದ ಸಂಗೀತಕ್ಕೆ ಯುವ ಮನಸ್ಸುಗಳು ಹುಚ್ಚೆದ್ದು ಕುಣಿದವು.

‘ಯುವ ದಸರಾ’ದ ಮೊದಲ ದಿನದ ಕಲರ್‌ಫುಲ್ ದೃಶ್ಯಾವಳಿ ಇದು.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಹೊರವಲಯದಲ್ಲಿರುವ ಉತ್ತನಹಳ್ಳಿಯ ಬಯಲು ಮೈದಾನದಲ್ಲಿ ಹಮ್ಮಿಕೊಂಡಿರುವ ವರ್ಣರಂಜಿತ ಯುವ ದಸರಾಕ್ಕೆ ವಿಜೃಂಭಣೆಯಿಂದ ಮಂಗಳವಾರ ಸಂಜೆ ಚಾಲನೆ ದೊರೆಯಿತು.

ಮ್ಯಾಜಿಕಲ್ ಮ್ಯೂಸಿಕ್ ರಸದೌತಣ:

ಅರ್ಜುನ್ ಜನ್ಯ ವೇದಿಕೆ ಏರಿದಾಗಲೇ ರಾತ್ರಿ 9.12. ಸಂಜೆಯಿಂದಲೇ ಕಾದು ಕುಳಿತಿದ್ದ ಪ್ರೇಕ್ಷಕರ ಸಮೂಹದಲ್ಲಿ ಆಗಲೇ ಸಂಗೀತದ ಸಂಚಲನವಾಯಿತು. ಬಳಿಕ ಎಜೆ ಬ್ಯಾಂಡ್ ಅಬ್ಬರ ಎಲ್ಲೆ ಮೀರಿತು. ಈ ತಂಡವು ಮ್ಯಾಜಿಕಲ್ ಮ್ಯೂಸಿಕ್ ರಸದೌತಣವನ್ನು ಉಣಬಡಿಸಿತು. ಪ್ರೇಮಗೀತೆ, ಮಾರ್ಧುಯ, ಡಿಸ್ಕೋ ಡಾನ್ಸ್ ಸಾಂಗ್ ಹೀಗೆ ವೈವಿಧ್ಯಮಯ ಹಾಡುಗಳೊಂದಿಗೆ ಯುವ ಪಡೆಯನ್ನು ಮನರಂಜಿಸಿತು.

‘ಕನ್ನಡ ಚಿತ್ರರಂಗ, ಸಂಗೀತಲೋಕಕ್ಕೆ ಮೈಸೂರು ಕೊಡುಗೆ ಅಪಾರ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅರ್ಜುನ್ ಅನ್ಯ ಅವರು, ‘ನಮಸ್ಕಾರ ಮೈಸೂರು’ ಎಂದು ಆರ್ಭಟಿಸುವ ಮೂಲಕ ಯುವ ಜನರನ್ನು ಬಡಿದೆಬ್ಬಿಸಿದರು. ಬಳಿಕ ಸಂಗೀತ ಮೊರೆತಕ್ಕೆ ಜೈ ಜೈ ಭಜರಂಗಿ ಹಾಡು ಸಾಕ್ಷಿಯಾಯಿತು.

ತದನಂತರ ಎಜೆ ರ‌್ಯಾಂಪ್‌ನಿಂದ ಭಜರಂಗಿ ಸಿನಿಮಾದ ‘ನೀ..ಸಿಗೋವರೆಗೂ..ನಗೋವರೆಗೂ.. ಕಾದಿರುವೆ. ಓ.’, ಲವ 360 ಚಿತ್ರದ ‘ಜಗವೇ ನೀನು ಗೆಳತಿಯೇ’...ಹೀಗೆ ಒಲವಿನ ಹಾಡುಗಳು ರಿಂಗಣಿಸಿತು.

ಲಕ್ಷ್ಮೀ ನಾಗರಾಜ, ಇಂದೂ ನಾಗರಾಜ, ನಿಶಾನ್ ರಾಯ್, ಹೇಮಂತ್, ಐಶ್ವರ್ಯಾ ರಂಗನಾಥ್, ಪೃಥ್ವಿ ಭಟ್, ವರುಣ್ ಪ್ರದೀಪ್ ಇನ್ನಿತರ ಗಾಯಕರ ಪಡೆ ಒಂದರ ಮೇಲೊಂದು ಒಂದು ಅದ್ಭುತ ಹಾಡುಗಳನ್ನು ಪ್ರಸ್ತುತಪಡಿಸಿ ಸಭಿಕರ ಮನಗೆದ್ದಿತು. ಇದಕ್ಕೆ ಸೊಗಸಾಗಿ ಸಾಥ್ ಕೊಟ್ಟರು ವಾದ್ಯಗಾರರ ಸಹ.

ವರನಟ ಡಾ.ರಾಜಕುಮಾರ್ ಅವರ ಗೀತೆಗಳ ಗುಚ್ಛಗಳ ಮೂಲಕ ರಾಗತಾಳದ ಮಾಧುರ್ಯವನ್ನೂ ಬಡಿಸುವುದನ್ನೂ ಮರೆಯಲಿಲ್ಲ. ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ..., ‘ಏಕೊ ಏನೊ ಈ ನನ್ನ ಮನವು ಉಯ್ಯಲೆಯಾಗಿ ತೂಗಿದೇ..’, ‘ಮಾತಲ್ಲಿ ಜೇನು ತುಂಬಿ ನೂರೆಂಟು ಹೇಳುವೆ..’ ‘ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ... ಓ..., ‘..ಜೀವ ಹೂವಾಗಿದೆ..’ ಹೀಗೆ ಮೂಡಿ ಬಂದ ಅಣ್ಣವ್ರ ಗೀತೆಗಳಿಗೆ ಜನ ಸಮೂಹ ತಲೆದೂಗಿತು.

ಸಂಗೀತದ ಧೂಳೆಬ್ಬಿಸಿದ ಲಂಗೋರಿ ಬ್ಯಾಂಡ್;

ಬೆಂಗಳೂರು ಮೂಲದ ಲಂಗೋರಿ ಬ್ಯಾಂಡ್ ಅಬ್ಬರದ ಸಂಗೀತದೊಂದಿಗೆ ಧೂಳೆಬ್ಬಿಸಿತು. ಷ್ಯೂಷನ್ ರಾಕ್ ಬ್ಯಾಂಡ್ ಆಗಿರುವ ಇದು ‘ಮಾದೇವ ಮಾದೇವ... ಸೂಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ.... ಹಾಡಿನೊಂದಿಗೆ ವೇದಿಕೆ ಏರಿ ಆರ್ಭಟಿಸಿತು. ಬಳಿಕ ಹಿಂದಿ ಗೀತೆಯಾದ ‘ಸಯ್ಯೋನಿ ಸಯೋನಿ...’ ಸಾಂಗು ಯುವ ಮನಸ್ಸಿಗಳಿಗೆ ಕಿಚ್ಚು ಹಚ್ಚಿತು. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಟೈಟಲ್ ಟ್ರ್ಯಾಕ್ ‘ನದಿಯೇ ಓ ನದಿಯೇ’ ಹಾಡು ಮನಸೊರೆಗೊಳಿಸಿತು.

ಕಿರಿಕ್ ಪಾರ್ಟಿ ಸಿನಿಮಾದ ‘ಬೆಳಗೆದ್ದು ಯಾರ ಮುಖವ ನಾನು ನೋಡಿದೇ, ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೇ..’ ಗೀತೆಯನ್ನು ಗಾಯಕಿ ಜಾಹ್ವನಿ ಭಟ್ ಸೊಗಸಾಗಿ ಮಂಡಿಸುವ ಮೂಲಕ ಯುವಕರ ಮನಸ್ಸಿಗೆ ಲಗ್ಗೆ ಇಟ್ಟರು.

‘ಬಾಟ್ಲಾ ಹೌಸ್’ ಹಿಂದಿ ಸಿನಿಮಾದ ‘ಓ ಸಾಕಿ...ಓ ಸಾಕಿ......! ಹಾಡಿಗೆ ಯುವ ಜನರು ಹೆಚ್ಚೆದ್ದು ಕುಣಿದರು. ಅಣ್ಣಾವ್ರ ಅಭಿಮಾನಿಗಾಗಿ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ. ಮತದಲ್ಲಿ ಮೇಲ್ಯಾವುದೋ....’ ಗೀತೆಯನ್ನು ಹಾಡುವುದರೊಂದಿಗೆ ಅದರ ಅರ್ಥೈಸಿಕೊಂಡು ನಡೆದರೆ ಜೀವನ ಸಾರ್ಥಕವಾಗಲಿದೆ ಎಂದು ಯುವ ಸಮೂಹಕ್ಕೆ ಹೇಳಿದರು.

ಮದ್ಯಪ್ರಿಯರಿಗಾಗಿ ‘ಏನಯ್ಯ ಮಾಯೆ, ಏನಯ್ಯ ಛಾಯೆ’ ಎಂಬ ಎಣ್ಣೆ ಸಾಂಗ್ ಹಾಡಿ ಯುವಜನರು ರಾಗದ ನಶೆಯಲ್ಲಿ ತೇಲಿಸಿದರು. ಶಂಕರನಾಗ್ ಅಭಿನಯದ ಗೀತಾ ಚಿತ್ರದ ‘ಸಂತೋಷಕ್ಕೆ ಹಾಡು’ ಗೀತೆಯೊಂದಿಗೆ ರಂಜಿಸಿದರು. ಲಂಗೋರಿ ಬ್ಯಾಂಡ್‌ನ ಗೀತೆಯಾದ ‘ಬೂಮ್ ಶಂಕರ್, ಬೂಮ್ ಶಂಕರ್...’, ‘ಎ’ ಸಿನಿಮಾದ ‘ಮಾರಿಕಣ್ಣು ಹೋರಿಮ್ಯಾಗೆ..’ ಗೀತೆಯೊಂದಿಗೆ ಗರ್ಜಿಸಿದರು.

ಜಿಟಿಡಿ ಹಿತ ನುಡಿ:

‘ಮೈಸೂರು ದಸರಾ ಎಷ್ಟೊಂದು ಸುಂದರ, ಚೆಲ್ಲಿದೆ ನಗೆಯ ಪನ್ನೀರ..! ಎಂದು ಗೀತೆ ಹಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು ‘ದಸರಾ ಎಲ್ಲೆಡೆ ಕಂಗೊಳಿಸುತ್ತಿದೆ.

ವಿಜೃಂಭಣೆಯಿಂದ ನಡೆಯುತ್ತಿದೆ. ಮೈಸೂರು ದಸರಾ ಚೆಂದ, ಯುವ ದಸರಾ ಮತ್ತಷ್ಟು ಅಂದ. ಹೀಗಾಗಿ, ಎಲ್ಲರೂ ಶಾಂತ ರೀತಿಯಲ್ಲಿ ವರ್ತನೆ ಮಾಡಿ ಸಹಕರಿಸಬೇಕು. ಈ ವರೆಗೆ ಯುವ ದಸರಾದಲ್ಲಿ ಅಹಿತರಕ ಘಟನೆಗಳು ಯಾವುದೂ ನಡೆದಿಲ್ಲ. ಹೀಗಾಗಿ, ಯಾವುದೇ ರೀತಿಯಲ್ಲೂ ಚ್ಯುತಿಯಾಗದಂತೆ ನಡೆದುಕೊಳ್ಳಬೇಕು ಎಂದು ಯುವ ಜನರಲ್ಲಿ ಕೋರಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕರಾದ ಜಿ.ಟಿ.ದೇವೇಗೌಡ, ರವಿಶಂಕರ್, ಎಂಎಲ್‌ಸಿಗಳಾದ ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್, ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ್ಪಾ ಅಮರನಾಥ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ, ಐಜಿಪಿ ಡಾ.ಬೋರಲಿಂಗಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಸಿಇಒ ಯುಕೇಶ್‌ಕುಮಾರ್, ಎಸ್‌ಪಿ ಎನ್.ವಿಷ್ಣುವರ್ಧನ್, ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್ ಸೇರಿದಂತೆ ಸಹಸ್ರಾರು ಜನರು ಮೊದಲ ದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net