

ಕಮಲನಗರ: ಎಲ್ಲ ದಾನಗಳಲ್ಲಿಯೇ ರಕ್ತದಾನ ಶ್ರೇಷ್ಠ. ರಕ್ತ ದಾನ ಮಾಡುವುದು ಒಳ್ಳೆಯ ಕಾರ್ಯ. ಇದರಿಂದ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗುತ್ತದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಿಪಿಐ ರಾಮಪ್ಪ ಸಾವಳಗಿ ಹೇಳಿದರು.
ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಣೇಶ ಮಂಡಳದಿAದ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ರಕ್ತಕ್ಕೆ ಪರ್ಯಾಯ ಇಲ್ಲ. ಆದ್ದರಿಂದ ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಬೇಕಾದರೆ ರಕ್ತವೇ ನೀಡಬೇಕು. ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು. ೧೮ರಿಂದ ೬೦ ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು.
ವಿಶ್ರಾಂತ ಪ್ರಾಚಾರ್ಯ ಎಸ್.ಎನ್.ಶಿವಣಕರ ಮಾತನಾಡಿ, ಒಂದು ಯೂನಿಟ್ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಸಂತಸದ ಸಂಗತಿ. ಇದರಿಂದ ಪ್ರಾಣ ಹಾನಿ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶಿಲಾ ಸಜ್ಜನಶೆಟ್ಟಿ ಮಾತನಾಡಿ, ಗಣೇಶ ಪ್ರತಿಷ್ಠಾಪಿಸಿ ಅನೇಕ ಕಡೆ ಮೋಜು ಮಸ್ತಿ ಮಾಡುತ್ತಿರುವ ಮಧ್ಯೆ ಇಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದು ಅನುಕರಣೀಯ ಕಾರ್ಯ ಎಂದರು. ೨೫ ಜನ ರಕ್ತದಾನ ಮಾಡಿದರು.
ಪಿಎಸ್‌ಐ ಚಂದ್ರಶೇಖರ ನಿರ್ಣೆ, ಶಿವಾನಂದ ವಡ್ಡೆ, ಶಿವಕುಮಾರ ಝುಲ್ಪೆ, ನೀಲಕಂಠರಾವ ಕಾಂಬಳೆ, ಶಿಲ್ಪಾ ತೋರಣೇಕರ್, ಬಂಟಿ ರಾಂಪುರೆ, ರಾಜಕುಮಾರ ಗಾಯಕವಾಡ, ಸಾಯಿನಾಥ ಕಾಂಬಳೆ, ಸಂಜೀವ ಒಡೆಯರ್, ಸಿದ್ದು ಸೋನಾಳೆ, ವೀರೇಶ ತೋರಣೇಕರ್, ಪ್ರಶಾಂತ ಖಾನಾಪುರೆ, ಸಂತೋಷ ತೋರಣೇಕರ್ ಇತರರಿದ್ದರು.