ಯುವ ಜನತೆಯಲ್ಲಿ ರಾಷ್ಟ್ರಭಕ್ತಿ ಜಾಗೃತಿ ಮೂಡಲಿ;ಶಾಸಕ ಜಿ.ಬಿ.ಜ್ಯೋತಿಗಣೇಶ್

28Tmk_Amrutha_Barathi_02
Published on

ತುಮಕೂರು: ಸ್ವಾತಂತ್ರೃ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಾಡಿನ ಜನರಿಗೆ ಹಾಗೂ ಯುವಪೀಳಿಗೆಗೆ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ, ಚಳವಳಿ ನಡೆದ ಜಾಗಗಳ ಮಹತ್ವ ತಿಳಿಸುವ ಉದ್ದೇಶದಿಂದ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಹೇಳಿದರು.

ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ

ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ್ದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಊರಿನಲ್ಲಿಯೇ ಸ್ವಾತಂತ್ರ್ಯ ಚಳವಳಿ ನಡೆದ ಕುರುಹುಗಳಿದ್ದರೂ ಅದರ ಅರಿವು ನಮಗಿರುವುದಿಲ್ಲ. ಸ್ವಾತಂತ್ರ್ಯ ಪಡೆ ಯಲು ಶ್ರಮಿಸಿದ ಹೋರಾಟಗಾರರ, ಸ್ಥಳಗಳ ಮಹತ್ವ ತಿಳಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದರು. ಜೂನ್ 1 ರಿಂದ 15ರವರೆಗೆ ಸ್ವಾತಂತ್ರ್ಯ ಚಳವಳಿ ನಡೆದ ನಾಡಿನ 15 ಸ್ಥಳಗಳಲ್ಲಿ ದೇಶಭಕ್ತಿ ಬಿಂಬಿಸುವ ನಾಟಕಗಳನ್ನು ಹಾಗೂ ಸಾಂಸ್ಕ ೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸ್ವಾತಂತ್ರೃಕ್ಕಾಗಿ ಹೋರಾಡಿದ ಮಹನೀಯರನ್ನು ಯುವ ಪೀಳಿಗೆಗೆ ಪರಿಚಯಿಸುವ ಮೂಲಕ ರಾಷ್ಟ್ರಭಕ್ತಿ ಜಾಗೃತಿಗೊಳಿಸುವ ಅಗತ್ಯ ಇದೆ ಎಂದು ತಿಳಿಸಿದರು. ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಾತಂತ್ರ್ಯದ ಹೆಜ್ಜೆ ಗುರುತುಗಳು ತುಮಕೂರಿನಲ್ಲಿಯೂ ಮೂಡಿವೆ. ಸ್ವಾತಂತ್ರೃಕ್ಕಾಗಿ ಲಕ್ಷಾಂತರ ಜನರ ತ್ಯಾಗಬಲಿದಾನಗಳು ನಡೆದಿದ್ದು ಜಿಲ್ಲೆಯ ಅನೇಕ ಮಹನೀಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದಾರೆ ಎಂದು ಸಂಸದ ಜಿ.ಎಸ್ ಬಸವರಾಜು ಸ್ಮರಿಸಿದರು.

ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸಂಕಲ್ಪ ವಿಧಿ ಭೋದಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಮೇಯರ್ ಬಿ.ಜಿ ಕೃಷ್ಣಪ್ಪ, ಜಿಪಂ ಸಿಇಒ ಡಾ.ಕೆ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ.ಅಜಯ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಇದ್ದರು.

ಭಾರತಾಂಬೆ ಪುತ್ಥಳಿ ಮೆರವಣಿಗೆ: ನಗರದ ಸ್ವಾತಂತ್ರ್ಯ ಚೌಕದಿಂದ ಅಶೋಕ ರಸ್ತೆ ಮೂಲಕ ಜಾನಪದ ಕಲಾತಂಡಗಳೊಂದಿಗೆ ಭಾರತಾಂಬೆ ಪುತ್ಥಳಿ ಮೆರವಣಿಗೆ ಪಾಲಿಕೆ ಆವರಣದವರೆಗೆ ನಡೆಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮೆರವಣಿಗೆ ಚಾಲನೆ ನೀಡಿದರು. ಈ ವೇಳೆ 75 ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದ ಕಾಲೇಜು ವಿದ್ಯಾರ್ಥಿಗಳ ತಿರಂಗಾ ಯಾತ್ರೆ ಗಮನಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net