ಯುವ ಜನತೆ ಸಾಮಾಜಿಕ ಕಳಕಳಿ ಮರೆತಂತಿದೆ: ಆರ್.ಪಿ.ವೆಂಕಟೇಶ್ ಮೂರ್ತಿ ಬೇಸರ

27_HSN_04
Published on

ಹಾಸನ: ಇಂದು ಸಮಾಜ ಎತ್ತ ಸಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಈಗಾಗಲೆ ಯುವ ಜನತೆ ಸಾಮಾಜಿಕ ಕಳಕಳಿಯನ್ನು ಮರೆತಂತಿದೆ ಎಂದು ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ ಬೇಸರ ವ್ಯಕ್ತಪಡಿಸಿದರು.

ನಗರ ಸಮೀಪ ಇರುವ ಹಾಸನ ವಿವಿಯ ಹೇಮಗಂಗೋತ್ರಿ ಆವರಣದಲ್ಲಿ ಸಮಾಜಕಾರ್ಯ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಸಮಾಜ ಕಾರ್ಯ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಕಾರ್ಯ ವಿಭಾಗ ಇಡೀ ಸಮಾಜದ ಕೈಗನ್ನಡಿಯಾಗಿದೆ. ಸಮಾಜದ ಬೆಳವಣಿಗೆಗೆ ಯಾವ ಕ್ರಮದಲ್ಲಿ ಮತ್ತು ಕನ್ನಡ ಶಾಲೆಗಳು, ಸರ್ಕಾರಿ ಶಾಲೆಗಳ ಪರಿಸ್ಥಿತಿ ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಸರ್ಕಾರಗಳು ತಮ್ಮ ಜವಾಬ್ದಾರಿ ಮರೆತಂತಿದೆ. ಸರ್ಕಾರಿ ಶಾಲೆಗಳನ್ನು ಇಂದು ಸಾಮಾನ್ಯ ಜನರು ದತ್ತು ಪಡೆದು ನಡೆಸುವ ಸಂದರ್ಭ ಎದುರಾಗಿರುವುದು ಅವಮಾನಕರ ಸಂಗತಿ ಎಂದರು.

ಶಿಕ್ಷಣ ಉಚಿತವಾಗಿ ಎಲ್ಲರಿಗೂ ಸಿಗಬೇಕು. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಸಮಾಜವನ್ನು ಕಟ್ಟುವ ಕೆಲಸವನ್ನು ಸರ್ಕಾರ ಮಾಡಬೇಕು. ಇಲ್ಲವಾದರೆ ಮುಂದೆ ದೊಡ್ಡ ಸಮಸ್ಯೆ ಎದುರಾಗುವ ಸಾದ್ಯತೆ ಹೆಚ್ಚಾಗಿದೆ. ಹಾಗೆಯೆ ಸರ್ಕಾರ ಕೆಲಸ ಮಾಡದಿದ್ದರೆ ನಾವು ಸುಮ್ಮನೆ ಕೂರದೆ ಸಾಮಾಜಿಕ ಕಳಕಳಿಯಿಂದ ಎಲ್ಲರೂ ಒಗ್ಗಟ್ಟಾಗಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸಗಳನ್ನು ಮಾಡಬೇಕು ಎಂದು ಕರೆ ನೀಡಿದರು.

ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಎಸ್.ಜೆ. ಮಹೇಶ್ ಅವರು ಮಾತನಾಡಿ, ಸಮಾಜ ಕಾರ್ಯ ವಿದ್ಯಾರ್ಥಿಗಳೆಲ್ಲ ಸೇರಿ ಸಮಾಜದ ಸಮಸ್ಯೆಗಳನ್ನು ಪರಿಹರಿಸುವಂತ ಕೆಲಸಗಳನ್ನು ಮಾಡಬೇಕಾಗಿದೆ. ಸಮಾಜ ಕಾರ್ಯ ಎಂದರೆ ಜನರಿಂದ ಜನರಿಗೋಸ್ಕರ ಜನಸ್ಪಂದನೆ ಮಾಡುವ ಕಾರ್ಯವನ್ನು ಸಾಮಾಜಿಕ ಸೇವೆ ಎಂದು ಕರೆಯುತ್ತೇವೆ. ಸಮಾಜದ ಸಮಸ್ಯೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾ ಸರ್ಕಾರದಿಂದ ಬರುವಂತಹ ಕಾರ್ಯಕ್ರಮಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕಾರ್ಯಗಳನ್ನು ಮಾಡಬೇಕಾಗಿದೆ. ಎಲ್ಲರನ್ನೂ ಸಮಾನವಾಗಿ ನೋಡುವಂತಹ ಒಂದು ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಎಂ.ಯು.ಲೋಕೇಶ್, ಡಾ.ಪ್ರದೀಪ್, ಡಾ.ವೇದಾ, ಭಾನು ಇನ್ನಿತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net