ಯುವ ಜನತೆ ವಚನ ಅರಿಯಲಿ

7 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಾಡಿನಾದ್ಯಂತ ಒಂದು ಒಳ್ಳೆ ಸಂಗೀತ ಶಿಷ್ಯ ಪರಂಪೆ ಕೊಟ್ಟವರು ಗದುಗಿನ ಪಂಚಾಕ್ಷರಿ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳು ಎಂದು ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಗೌರವ ಸದಸ್ಯೆ ಭಾರತಿದೇವಿ ರಾಜಗುರು ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ನಂದಾ ಪಾಟೀಲ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಡಾ. ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ-2023ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ವಿದ್ಯೆ ಸಾಗರವಿದ್ದಂತೆ. ಸಾಗರದಲ್ಲಿಯ ಒಂದು ಬೊಗಸೆಯಷ್ಟಾದರೂ ವಿದ್ಯೆ ಕಲಿತು ಅದನ್ನು ಮುಂದುವರೆಸಬೇಕು. ಗದುಗಿನ ಪುಣ್ಯಾಶ್ರಮ ಬಡ, ಅಂಧ ಮಕ್ಕಳಿಗೆ ಶ್ರಮಿಸಿ ನಾಡಿನಾದ್ಯಂತ ಪ್ರತಿಭಾವಂತ ಕಲಾವಿದರನ್ನು ನೀಡಿದ ಹಿರಿಮೆ ಹೊಂದಿದೆ. ಆ ಪರಂಪರೆಯಲ್ಲಿ ಬೆಳೆದ ಡಾ. ಅಯ್ಯಪ್ಪಯ್ಯ ಹಲಗಲಿಮಠ ಯುವ ಸಂಗೀತಗಾರರಿಗೆ ಮಾದರಿಯಾಗಿದ್ದಾರೆ ಎಂದರು.
ದತ್ತಿ ದಾನಿ ಡಾ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಶರಣರು ನಾಡಿಗೆ ನೀಡಿದ ವಚನಗಳು ಇಂದಿನ ಯುವ ಜನತೆಗೆ ಸಂಗೀತ ರೂಪದಲ್ಲಿ ತಲುಪಿದಲ್ಲಿ ಪರಿಣಾಮ ಬೀರುತ್ತವೆ ಎನ್ನುವ ಕಾರಣಕ್ಕೆ ವಚನ ಸಂಗೀತ ಪುರಸ್ಕಾರ ನೀಡಲಾಗುತ್ತಿದೆ. ವಚನ ಸಂಗೀತ ಸ್ಪರ್ಧೆ ಮೂಲಕ ಯುವ ಸಂಗೀತ ಕಲಾವಿದರಿಗೆ ಈ ಪ್ರಶಸ್ತಿಯನ್ನು ದತ್ತಿ ಮೂಲಕ ನೀಡುತ್ತಿದ್ದೇವೆೆ ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಕಲಾವಿದ ಡಾ. ಅಯ್ಯಪ್ಪಯ್ಯ ಹಲಗಲಿಮಠ ಪ್ರಶಸ್ತಿ ಸ್ವೀಕರಿಸಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಸಾದ ಮಡಿವಾಳ ತಬಲಾ, ವಿನೋದ ಪಾಟೀಲ ಹಾರ್ಮೋನಿಯಂ ಸಾಥ್ ನೀಡಿದರು.
ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ. ಧನವಂತ ಹಾಜವಗೋಳ, ಎಸ್.ಎಸ್. ದೇಸಾಯಿ, ಸಿ. ಎಸ್. ಪಾಟೀಲ, ಅನಿಲ ಮೇತ್ರಿ, ಡಾ. ಅರ್ಜುನ ವಠಾರ, ಚೆನ್ನಯ್ಯ ಹಿರೇಮಠ, ಬಿ.ಎಸ್. ಶಿರೋಳ, ಸಂತೋಜಿ, ಶಂಕರ ಬೆಟಗೇರಿ, ಶರಣಮ್ಮ ಪಾಟೀಲ, ಪ್ರಕಾಶ ಮಲ್ಲಿಗವಾಡ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net