ಯುವ ಜನತೆ ಮಾದಕ ವ್ಯಸನಿಗಳಾಗುತ್ತಿರುವುದು ದುರ್ದೈವ

It is unfortunate that young people are becoming drug addicts
ವಿಜಯಪುರದ ಬಿಡಿಈ ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿದರು.
Published on

ವಿಜಯಪುರ: ಯುವ ಜನತೆ ಪಾಶ್ಚಾತ್ಯ ರಾಷ್ಟ್ರಗಳ ವೈಭವೀಕರಣದ ಅಂಧಾನುಕರಣೆಯ ದಾಸರಾಗಿ ಮಾದಕ ವಸ್ತುಗಳ ಮೊರೆ ಹೋಗುತ್ತಿರುವುದು ದುರ್ದೈವದ ಸಂಗತಿ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಹೇಳಿದರು.

ನಗರದ ಬಿಡಿಈ ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಗಾಂಧಿ ಚೌಕ್ ಪೊಲೀಸ್ ಠಾಣೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಸಂಸ್ಕೃತಿ- ಪರಂಪರೆಗಳ ನಾಡು. ಭಾರತದ ಪ್ರಾಚೀನ ಪದ್ಧತಿಗಳನ್ನು ವಿದೇಶದ ಪ್ರಜೆಗಳು ತಮ್ಮ ಮನೆ ಮನಗಳಲ್ಲಿ ಅನುಸರಿಸುತ್ತಿದ್ದರೆ, ಇಲ್ಲಿನ ಯುವ ಜನತೆ ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಅವಶ್ಯಕತೆಗೆ ಅನುಗುಣವಾಗಿ ಮೊಬೈಲ್ ಬಳಸಬೇಕು. ಮಾದಕ ವಸ್ತುಗಳ ವ್ಯಸನಿಗಳು ನಿಮ್ಮ ಗಮನಕ್ಕೆ ಬಂದರೆ ಕೂಡಲೇ ಅವರ ಮನೆಯವರಿಗೆ ಅಥವಾ ಸಮೀಪದ ಪೊಲೀಸರಿಗೆ ತಿಳಿಸಿದರೆ ಅಂತಹ ವ್ಯಕ್ತಿಯನ್ನು ವ್ಯಸನ ಮುಕ್ತ ಮಾಡಬಹುದಾಗಿದೆ ಎಂದರು.

ಪೋಲಿಸ್ ಉಪ ಅಧೀಕ್ಷಕ ಬಸವರಾಜ ಯಲಿಗಾರ ಮಾತನಾಡಿ, ಮಾದಕ ವ್ಯಸನಿ ಮಾನಸಿಕ, ದೈಹಿಕವಾಗಿ ಕುಗ್ಗಿ ಸಮಾಜದಿಂದ ದೂರ ಉಳಿಯುತ್ತಾನೆ. ಮಕ್ಕಳು ಪ್ರಾಥಮಿಕ ಹಂತದಿಂದಲೇ ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂ ಅಂಥವರ ಆದರ್ಶವನ್ನು ತೆಗೆದುಕೊಳ್ಳಬೇಕು. ಜತೆಗೆ ದೇಶದ ಹಿತ ಕಾರ್ಯ ಮಾಡಬೇಕು. ಒಂದು ಹಣ್ಣು ಕೊಳೆತರೆ ತನ್ನ ಜತೆಗೆ ನಾಲ್ಕು ಹಣ್ಣುಗಳನ್ನೂ ಕೂಡ ಹಾಳು ಮಾಡುತ್ತದೆ. ಹೀಗಾಗಿ ಮಾದಕ ವ್ಯಸನಿ ಬಲೆಯಲ್ಲಿ ಬೀಳದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.

ಸಿಪಿಐ ಪ್ರದೀಪ ತಳಕೇರಿ, ಪಿಎಸ್‌ಐ ಸುಷ್ಮಾ ನಂದಿಗೊಂಡ ವೇದಿಕೆಯಲ್ಲಿದ್ದರು. ಲಕ್ಷ್ಮಿ ಕಟ್ಟಿ ಮತ್ತು ರೋಹಿಣಿ ಜಿಗೇರಿ ಪ್ರಾರ್ಥಿಸಿದರು. ಪ್ರಾಚಾರ್ಯ ಪಿ.ಟಿ. ಕೋಟ್ನಿಸ್ ಸ್ವಾಗತಿಸಿದರು. ರಘೂತ್ತಮ ಅರ್ಜುಣಗಿ ನಿರೂಪಿಸಿ ವಂದಿಸಿದರು. ಅಭಿಯಾನದಡಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ತೃಪ್ತಿ ತೊದಲಬಾಗಿ, ಸಪ್ನಾ ಚೌಡೇಕರ ಹಾಗೂ ಲಕ್ಷ್ಮೀ ಚೌಧರಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ನೀಡಲಾಯಿತು.

ಮಹಾವಿದ್ಯಾಲಯದ ಆರ್.ಎಸ್. ದೀಕ್ಷಿತ, ಸುಧೀಂದ್ರ ಕುಲಕರ್ಣಿ, ಕಿರಣ ಹರಿದಾಸ, ಗೀತಾ ಸಲಗರ, ಜಮೀಲಾ ಅಕ್ಕಲಕೋಟ, ಸೌರಭ ನಾಮಣ್ಣವರ, ಪಿ.ಬಿ. ಸಾಂಗ್ಲಿಕರ, ಪಿ.ಎಂ. ಯಾಳವಾರ, ಎಸ್.ವೈ. ವಾಲಿಕಾರ, ಎಸ್.ವಿ. ಹೊನವಾಡ, ಎಸ್.ಎಚ್. ನಾಯಕ, ಜಿ.ಜೆ. ಕುಲಕರ್ಣಿ, ಪಿ.ಆರ್. ಕುಲಕರ್ಣಿ, ಎಸ್.ಎಚ್. ದಡ್ಡಿ, ಯು.ಬಿ. ಆಶ್ರೀತ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net