ಯುವ ಜನತೆ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ: ದಾಕ್ಷಾಯಿಣಿ

ಯುವ ಜನತೆ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ: ದಾಕ್ಷಾಯಿಣಿ
Published on

ಹಾಸನ: ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮಾದಕ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಿದ್ದು, ಯುವ ಜನತೆ ಮಾದಕ ವಸ್ತುಗಳ ಸೇವನೆ ಮಾಡುವುದಿಲ್ಲವೆಂದು ಇಂದೇ ಪ್ರತಿಜ್ಞೆ ಮಾಡುವುದರ ಜೊತೆಗೆ ಉತ್ತಮ ಹವ್ಯಾಸ ಬೆಳೆಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ.ದಾಕ್ಷಾಯಿಣಿ ಯುವಕರಿಗೆ ಕಿವಿ ಮಾತು ಹೇಳಿದರು.
ನಗರದ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬುಧವಾರ ಅಂತರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಕಳ್ಳ ಸಾಗಣೆ ವಿರೋಧಿ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಮೊಬೈಲ್ ಗೀಳು ಹೆಚ್ಚಾಗುತ್ತಿದ್ದು, ಇದು ಒಂದು ವ್ಯಸನವಾಗಿ ಪರಿಣಮಿಸುತ್ತಿದೆ. ಇದರಲ್ಲಿ ಒಳ್ಳೆಯ ಹಾಗೂ ಕೆಟ್ಟ ಸಂಗತಿಗಳೆರಡು ಇದ್ದು, ಒಳ್ಳೆಯ ಸಂಗತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ ಅವರು ಮಾತನಾಡಿ, ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದು, ಇದರಿಂದಾಗಿ ಸಾಕಾಷ್ಟು ಅಡ್ಡಪರಿಣಾಮಗಳನ್ನು ಎದುರಿಸುತ್ತಿದ್ದು, ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯ ಮತ್ತು ಜೀವನ ಹಾಳಾಗುವುದರಿಂದ ಅದರ ಮೋಹಕ್ಕೆ ಒಳಗಾಗದೆ ಉತ್ತಮ ರೀತಿಯಲ್ಲಿ ವಿದ್ಯಾರ್ಥಿ ಜೀವನವನ್ನು ನಿರ್ವಹಿಸಬೇಕೆಂದು ತಿಳಿಸಿದರು.
ಅಬಕಾರಿ ಉಪ ಆಯುಕ್ತರಾದ ಮೋತಿಲಾಲ್ ಅವರು ಮಾತನಾಡಿ, ಮಾದಕ ವಸ್ತು ವ್ಯಸನದ ಕುರಿತು ಅರಿವು ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಬೇಕು. ಏಕೆಂದರೆ ಜನಸಾಮಾನ್ಯರು ಇವುಗಳ ವ್ಯಸನಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದು, ಇದರಿಂದ ಅವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.
ಅಕ್ರಮ ಮಾದಕ ವಸ್ತು ಬಳಕೆ ಹಾಗೂ ಮಾರಾಟವು ಒಂದು ಕಾನೂನು ಬಾಹೀರ ಚಟುವಟಿಕೆಯಾಗಿದ್ದು ಇಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ತಮ್ಮ ಇಲಾಖೆಯನ್ನು ಸಂಪರ್ಕಿಸಲು ತಿಳಿಸಿದರು. ಮಾದಕ ವಸ್ತುಗಳನ್ನು ಬಳಸುವವರು ಹಾಗೂ ಮಾರಾಟಗಾರಿಗೆ ನೀಡುವ ಶಿಕ್ಷೆ ಮತ್ತು ದಂಡದ ಪ್ರಮಾಣದ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ನಾಗೇಶ್.ಪಿ ಆರಾಧ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹದಿ ಹರೆಯದವರು ಮತ್ತು ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಇದರಿಂದ ಉಂಟಾಗುವ ಪರಿಣಾಮಗಳಿಂದ ಆರೋಗ್ಯ ಮತ್ತು ಅವರ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ಪ್ರಾಂಶುಪಾಲೆ ರತ್ನಮ್ಮ ಅವರು ಮಾತನಾಡಿ, ಡ್ರಗ್ಸ್ ಸೇವನೆ ವಿದ್ಯಾರ್ಥಿಗಳಿಗೆ ಮಾರಕವಾಗಿದ್ದು, ಇದರಿಂದ ಹಲವಾರು ಶಾರೀರಿಕ ಹಾಗೂ ಮಾನಸಿಕ ತೊಂದರೆಗಳಾಗುತ್ತವೆ, ನರ್ಸಿಂಗ್ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ ಮಾದಕ ವಸ್ತು ವ್ಯಸನಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಇರುವುದರಿಂದ ಇದರಿಂದ ದೂರವಿರಲು ತಿಳಿಸಿದರು.
ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಮನೋರೋಗ ತಜ್ಞೆ ಡಾ.ಜಿ. ಭಾರತಿ ಮಾತನಾಡಿ, ಮಾದಕ ವಸ್ತುಗಳ ವಿಂಗಡಣೆ ಮತ್ತು ಅದರ ಅಡ್ಡಪರಿಣಾಮಗಳ ಬಗ್ಗೆ ತಿಳಿಸುತ್ತಾ ಎನ್.ಎಚ್.ಎಸ್ ಸರ್ವೇಯ ಅಂದಾಜಿನ ಪ್ರಕಾರ ಭಾರತದಲ್ಲಿ 62.5 ಮಿಲಿಯನ್ ಮದ್ಯಪಾನ ಮಾಡುವವರಿದ್ದಾರೆ, 8.75 ಮಿಲಿಯನ್ ಕ್ಯಾನಬಿಸ್(ಭಂಗಿ) ಸೇವನೆ ಮಾಡುವವರು ಮತ್ತು 2 ಮಿಲಿಯನ್ ಜನರು ನಿದ್ರಾಹೀನತೆಗಾಗಿ ಔಷಧಗಳನ್ನು ಬಳಸುವವರು ಇದ್ದಾರೆ ಎಂಬ ಅಂಕಿ ಅಂಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೋಗ ವಾಹಕ ಆಶೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ನಾಗಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಸಿ.ಲೋಕೇಶ್ , ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಂಧ್ಯಾ, ಹಿಮ್ಸ್‌ನ ಪ್ರಭಾರ ನಿರ್ದೇಶಕ ಡಾ.ಚನ್ನವೀರಪ್ಪ, ಡಿ.ವೈ.ಎಸ್.ಪಿ. ಕೆ.ಎಸ್. ಮುರುಳೀಧರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net