

ಚಿಕ್ಕಬಳ್ಳಾಪುರ : ಕ್ರೀಡಾ ವಿಭಾಗದಲ್ಲೂ ಜಿಲ್ಲೆಯು ಮುಂಚೂಣಿಯಲ್ಲಿರಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ಕ್ರೀಡಾಪಟುಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಹೂವು, ಹಣ್ಣು, ತರಕಾರಿ, ಹಾಲು, ರೇಷ್ಮೆ ಉತ್ಪಾದನೆಯಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದೆ. ವಿವಿಧ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಯ ಮೂಲಕ ಗಮನ ಸೆಳೆಯುತ್ತಿದೆ. ಇದೇ ಮಾದರಿಯಲ್ಲಿ ಈ ಭಾಗದ ಪ್ರತಿಭಾವಂತ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ನಿರಂತರವಾಗಿ ಪದಕಗಳನ್ನು ಗೆಲ್ಲುವ ಮೂಲಕ ಕೀರ್ತಿ ತರಬೇಕು ಎಂದರು.
ಜಿಲ್ಲೆಯಲ್ಲಿನ ಕ್ರೀಡಾಂಗಣಗಳ ಅಭಿವೃದ್ಧಿ, ಕ್ರೀಡಾಪಟುಗಳಿಗೆ ಅಗತ್ಯ ಸವಲತ್ತು ವಿತರಣೆ, ನಿರಂತರ ಕ್ರೀಡಾಕೂಟಗಳ ಆಯೋಜನೆ ಮೂಲಕ ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಇದನ್ನು ಸದ್ವಿನಿಯೋಗಪಡಿಸಿಕೊಂಡು ಯುವ ಪ್ರತಿಭಾವಂತ ಕ್ರೀಡಾಪಟುಗಳು ಬೆಳಕಿಗೆ ಬರಬೇಕು ಎಂದು ತಿಳಿಸಿದರು.
ರಾಜ್ಯ ಕೂಡೋ ಸಂಸ್ಥೆಯ ಕಾರ್ಯದರ್ಶಿ ಮತ್ತು ತರಬೇತುದಾರ ಮಹಮ್ಮದ್ ಜಬೀವುಲ್ಲಾ ಮಾತನಾಡಿ, ಶಿವಮೊಗ್ಗದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕೂಡೋ ಪಂದ್ಯಾವಳಿಯಲ್ಲಿ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಗೆಲುವು ಸಾಧಿಸಿ, ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇದರಲ್ಲೂ ಹೆಚ್ಚಿನ ಗೆಲುವು ಲಭಿಸುವ ವಿಶ್ವಾಸವಿದೆ ಎಂದರು.
ಕರ್ನಾಟಕ ಅಹಿಂದ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಎ.ಕೃಷ್ಣಚಾರಿ, ಮುಖಂಡರಾದ ಇಬ್ರಾಹಿಂ, ಮುದ್ದುಕೃಷ್ಣ, ಟಿ.ಟಿ.ನರಸಿಂಹಪ್ಪ, ಯುವ ಮುಖಂಡ ಮಂಜುನಾಥ್ ಮತ್ತಿತರರು ಇದ್ದರು.