ಯುವ ಕಾಂಗ್ರೆಸ್ ವತಿಯಿಂದ ಎಸ್‌ಬಿಐ ಮುಖ್ಯ ಕಚೇರಿ ಮುಂದೆ ಪ್ರತಿಭಟನೆ

ಯುವ ಕಾಂಗ್ರೆಸ್ ವತಿಯಿಂದ ಎಸ್‌ಬಿಐ ಮುಖ್ಯ ಕಚೇರಿ ಮುಂದೆ ಪ್ರತಿಭಟನೆ
Published on

ಹಾಸನ: ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಎಸ್‌ಬಿಐ ಎಲೆಕ್ಟ್ರಾಲ್ ಬಾಂಡ್ ವಿವರ ನೀಡದೇ ಇರುವುದನ್ನು ಖಂಡಿಸಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ಮುಖ್ಯ ಕಚೇರಿ ಮುಂದೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಬ್ಯಾಂಕ್ ಒಳಗೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದಾಗ ಪೊಲೀಸರು ಮುಖ್ಯದ್ಚಾರದಲ್ಲೇ ತಡೆದರು. ನಂತರ ಬ್ಯಾಂಕ್ ಬಾಗಿಲಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಪ್ರತಿಷ್ಠಿತ ಬ್ಯಾಂಕ್ ಎಂದು ಹೆಸರಾಗಿರುವ ಎಸ್‌ಬಿಐ ಇಂದು ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಒಂದು ಸಾರ್ವಜನಿಕ ಉದ್ದಿಮೆಯಾಗಿದ್ದು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕ್ ವ್ಯವಹಾರ ನಡೆಸಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕೈಗೊಂಬೆಯಾಗಿ ಬ್ಯಾಂಕ್ ವರ್ತಿಸುತ್ತಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಎಸ್‌ಬಿಐ ಚುನಾವಣೆ ಎಲೆಕ್ಟ್ರಾಲ್ ಬಾಂಡ್‌ಗಳ ವಿವರ ಬಹಿರಂಗಪಡಿಸಿದೆ ಇರುವುದನ್ನು ನಾವು ಖಂಡಿಸುತ್ತೇವೆ. ಕೂಡಲೇ ಚುನಾವಣೆಗೆ ಸಂಬಂಧಿಸಿದ ಬಾಂಡ್ ದಾನಿಗಳ ಹೆಸರನ್ನು ಬಹಿರಂಗಪಡಿಸುವಂತೆ ಸುಪ್ರಿಂ ಕೋರ್ಟ್ ಆದೇಶ ಮಾಡಿದೆ. ಆದರೂ ಕೇಂದ್ರ ಸರ್ಕಾರದ ಜತೆ ಹೊಂದಾಣಿಕೆ ಮಾಡಿಕೊಂಡು ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಾನಿಗಳ ಹೆಸರನ್ನು ಹೇಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಇಂತಹ ನಡೆಯನ್ನು ಜಿಲ್ಲಾ ಯುವ ಕಾಂಗ್ರೆಸ್ ಪಕ್ಷದ ವತಿಯಿಂದ ಖಂಡಿಸುತ್ತೇವೆ. ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಆದೇಶದಂತೆ ರಾಜ್ಯಾದ್ಯಂತ ಎಸ್‌ಬಿಐ ಪ್ರಧಾನ ಕಚೇರಿ ಮುಂದೆ ಪ್ರತಿಭಟಿಸಿ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಬೀಗ ಹಾಕುವ ಮೂಲಕ ಉಗ್ರ ಹೋರಾಟ ಮಾಡಲಾಗಿದೆ. ಕೂಡಲೇ ಸಂಬಂಧಿಸಿದ ಬಾಂಡ್ ದಾನಿಗಳ ಹೆಸರನ್ನು ಬಹಿರಂಗಪಡಿಸಬೇಕು, ಇಲ್ಲವಾದರೇ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಯೂತ್ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಇಸ್ಮಾಯಿಲ್, ವಿವೇಕ್, ಮನು ಕುಮಾರ್, ಸುಜನ್, ಶಿವಕುಮಾರ್, ಮೌಹಿನ್, ಅಭಿಲಾಷ್, ಗಣೇಶ್, ಸತೀಶ್, ಪ್ರಕಾಶ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net