

ಮೈಸೂರು: ಪತ್ತೆಯಾಗಿರುವ ಮಾದಕವಸ್ತು ತಯಾರಿಸುವ ಘಟಕ ಹೆಸರಿನಲ್ಲಿ ಮೈಸೂರಿನ ಮರ್ಯಾದೆಯನ್ನು ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಡ್ರಗ್ಸ್ ಬಗ್ಗೆ ತಪ್ಪು ಮಾಹಿತಿ ನೀಡಿದ ಮಹಾರಾಷ್ಟ್ರ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಮೈಸೂರಲ್ಲಿ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ ಎಂದು ತಪ್ಪು ಮಾಹಿತಿ ನೀಡಿ ಬಿಜೆಪಿ ನಾಯಕರು ಮೈಸೂರಿನ ಮಾನ- ಮರ್ಯಾದೆಯನ್ನು ಕಳೆಯುತ್ತಿದ್ದಾರೆ.
ಆದರೆ, ಇಲ್ಲಿ ಸಿಕ್ಕಿರುವುದು ಎಂಡಿ ಮಾತ್ರ. ಅದರ ಮೌಲ್ಯ ಕೇವಲ 4 ಕೋಟಿ ರೂ. ಮಾತ್ರ. ಆದರೆ 390 ಕೋಟಿ ರೂ. ಎಂದು ಮುಂಬೈ ಪೊಲೀಸರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.
ಮೈಸೂರಿಗೆ ಗುಜರಾತ್, ಮಹಾರಾಷ್ಟ್ರದಿಂದ ಮಾದಕ ವಸ್ತು ಬಂದಿದೆ ಎಂದು ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ. ಆದರೆ, ಇದು ಇಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಸುಳ್ಳು ಹೇಳುವ ಮೂಲಕ ಬಿಜೆಪಿಯವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಗೆ ಕಪ್ಪು ಮಸಿ ಬಳಿಯುವ ಯತ್ನ ನಡೆಸುತ್ತಿದೆ ಎಂದು ದೂರಿದರು.
ಯುವ ಕಾಂಗ್ರೆಸ್ ಮುಖಂಡರಾದ ಅಬ್ರಾರ್, ಮಲ್ಲೇಶ್, ಹೇಮಂತ್, ಶಶಿಕುಮಾರ್ ಇನ್ನಿತರರಿದ್ದರು.