

ರಾಯಚೂರು: ಯುಯುಸಿಎಂಎಸ್ ಎಲ್ಲ ವಿವಿ ಮತ್ತು ಕಾಲೇಜುಗಳನ್ನು ಕ್ರೋಢೀಕರಿಸಿ ಎಲ್ಲರಿಗೂ ಒಂದೇ ವ್ಯವಸ್ಥೆಯಡಿ ವಿವಿಧ ಮಾಹಿತಿ ಒದಗಿಸುವುದರೊಂದಿಗೆ ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿಯನ್ನು ಗಣಕೀರಣಗೊಳಿಸುತ್ತದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ಜಾಯ್ ಹ್ಯಾರಿಸ್ ಹೊಸ್ಕೆರಿ ಹೇಳಿದರು.
ಸ್ಥಳೀಯ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜಿನಲ್ಲಿ ಸಮಗ್ರ ವಿವಿ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಕುರಿತು ಗುರುವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಎನ್‌ಇಪಿ ಜಾರಿಯಾದಾಗ ಅದರೊಂದಿಗೆ ಯುಯುಸಿಎಂಎಸ್ ಅಭಿವೃದ್ಧಿ ಪಡಿಸಲಾಗಿದ್ದು, ದೇಶದಲ್ಲಿಯೇ ಈ ವ್ಯವಸ್ಥೆಯನ್ನು ಜಾರಿಗೆ ತಂದ ಪ್ರಥಮ ರಾಜ್ಯ ಕರ್ನಾಟಕವಾಗಿದೆ ಎಂದರು.
ಉಪನ್ಯಾಸಕರು ಸಂಸ್ಥೆಗೆ ಸೇರಿದ ದಿನದಿಂದ ಅವರ ಸಂಶೋಧನೆ, ವೌಲ್ಯಮಾಪನ, ಶೈಕ್ಷಣಿಕ ಕಾರ್ಯಕ್ಷಮತೆ, ಪದೋನ್ನತಿ, ಪಠ್ಯಕ್ರಮ, ಪಾಠ ಯೋಜನೆ, ವಿದ್ಯಾರ್ಥಿಗಳ ಹಾಜರಾತಿ ಸೇರಿದಂತೆ ಇನ್ನಿತರ ಚಟುವಟಿಕೆಗಳ ಕಾರ್ಯನಿರ್ವಹಣೆಗೆ ಯುಯುಸಿಎಂಎಸ್ ಅನುಕೂಲವಾಗಿದೆ ಎಂದು ಹೇಳಿದರು.
ತಾರಾನಾಥ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್ ಮಾತನಾಡಿ, ಕಂಪ್ಯೂಟರ್ ತಂತ್ರಜ್ಞಾನ ನಮ್ಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ ತಂದಿದ್ದು, ಅದರಲ್ಲೂ ಎನ್‌ಇಪಿ ಜಾರಿಯಾದ ನಂತರದಲ್ಲಿ ಉನ್ನತ ಶಿಕ್ಷಣದ ಕಾರ್ಯವೈಖರಿಗಳು ಗಣಕೀಕೃತಗೊಂಡಿವೆ. ಯುಯುಸಿಎಂಎಸ್ ಬಗ್ಗೆ ತಿಳಿದುಕೊಳ್ಳುವುದು ಇಂದು ಅನಿವಾರ್ಯವಾಗಿದೆ ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ.ಬಸಪ್ಪ ತಿಪ್ಪಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಕುರಿತು ತಿಳಿದುಕೊಳ್ಳುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆ ಮತ್ತು ಉಪನ್ಯಾಸಕರ ಜವಾಬ್ದಾರಿಯಾಗಿದೆ. ಉಪನ್ಯಾಸಕರು ಸಿಬ್ಬಂದಿ ಯುಯುಸಿಎಂಎಸ್ ಬಗ್ಗೆ ಅರಿತುಕೊಳ್ಳಬೇಕು ಎಂದು ಹೇಳಿದರು.