ಯುಪಿಗೆ ತೆರಳಿದ ಕಾರ್ವಿುಕರು

h17-Bus Stand 2
Published on

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಭಾನುವಾರ ಉತ್ತರ ಪ್ರದೇಶದ ಬಸ್ತಿಗೆ ಹೊರಟ ಶ್ರಮಿಕ ಸ್ಪೆಷಲ್ ಎಕ್ಸ್​ಪ್ರೆಸ್ ರೈಲಿನಲ್ಲಿ 1,446 ವಲಸೆ ಕಾರ್ವಿುಕರು ಪ್ರಯಾಣಿಸಿದರು.

ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಹಾವೇರಿ, ಗದಗ ಸೇರಿ ವಿವಿಧ ಜಿಲ್ಲೆಗಳ ಉತ್ತರ ಪ್ರದೇಶ ಮೂಲದ ವಲಸೆ ಕಾರ್ವಿುಕರಲ್ಲಿ ಬಹುತೇಕರು 23 ದಿನ ಮುಂಚೆಯೇ ಹುಬ್ಬಳ್ಳಿಗೆ ಆಗಮಿಸಿ, ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ವಸತಿ ನಿಲಯದಲ್ಲಿ ತಂಗಿದ್ದರು. ಇವರಲ್ಲಿ ಕೊಪ್ಪಳದ ಸ್ಟೀಲ್ ಪ್ಲಾ್ಯಂಟ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಉತ್ತರ ಪ್ರದೇಶದ ಬಸ್ತಿಗೆ ಭಾನುವಾರ 1 ಶ್ರಮಿಕ ಎಕ್ಸ್​ಪ್ರೆಸ್ ರೈಲು ತೆರಳಿದ್ದು, ಸೋಮವಾರ ಮತ್ತೊಂದು ರೈಲು ತೆರಳಲಿದೆ. ಎಲ್ಲ ಪ್ರಯಾಣಿಕರಿಗೆ 3 ದಿನಗಳಿಂದ ಟಿಕೆಟ್ ನೀಡಲಾಗುತ್ತಿದ್ದು, ಪ್ರತಿ ಟಿಕೆಟ್ ದರ 820 ರೂ.ಗಳನ್ನು ವಲಸೆ ಕಾರ್ವಿುಕರು ಪಾವತಿಸಿದ್ದಾರೆ. ಭಾನುವಾರ ಬೆಳಗ್ಗೆ 6 ಗಂಟೆಯಿಂದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಎಲ್ಲ ವಲಸೆ ಕಾರ್ವಿುಕರ ಆರೋಗ್ಯ ತಪಾಸಣೆ ನಡೆಸಿ, ಸಾರಿಗೆ ಸಂಸ್ಥೆಯ ಬಸ್​ಗಳಲ್ಲಿ ಅವರನ್ನು ರೈಲ್ವೆ ನಿಲ್ದಾಣಕ್ಕೆ ಕರೆ ತರಲಾಯಿತು. ಮಧ್ಯಾಹ್ನ 12.25ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ರೈಲು ಉತ್ತರ ಪ್ರದೇಶದತ್ತ ಹೊರಟಿದ್ದು, ಮಂಗಳವಾರ ಬೆಳಗ್ಗೆ 9 ಗಂಟೆಗೆ ಬಸ್ತಿ ನಿಲ್ದಾಣ ತಲುಪಲಿದೆ. ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಳಖೇಡೆ, ಪೊಲೀಸ್ ಆಯುಕ್ತ ಆರ್. ದಿಲೀಪ, ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ಎಸ್. ಹಿತ್ತಲಮನಿ, ನೈಋತ್ಯ ರೈಲ್ವೆ ವಲಯದ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಹಾಗೂ ಇತರರು ವಲಸೆ ಕಾರ್ವಿುಕರನ್ನು ಬೀಳ್ಕೊಟ್ಟರು.

ಜಿಲ್ಲಾಡಳಿತದ ವತಿಯಿಂದ ಕಾರ್ವಿುಕರಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನ ಊಟದ ಪ್ಯಾಕೆಟ್ ವಿತರಿಸಲಾಯಿತು. ಭಾನುವಾರ ರಾತ್ರಿಯ ಊಟ, ಸೋಮವಾರ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ರೈಲ್ವೆ ಇಲಾಖೆ ನೀಡಲಿದೆ. ನಿಲ್ದಾಣಕ್ಕೆ ಬರುವ ವಲಸೆ ಕಾರ್ವಿುಕರಿಗೆ ಪೊಲೀಸ್ ಇಲಾಖೆಯಿಂದ ಬಿಸ್ಕತ್ ವಿತರಿಸಲಾಯಿತು. ಅಕ್ಷಯ ಪಾತ್ರೆ ವತಿಯಿಂದ ಮಾವಿನ ಹಣ್ಣುಗಳನ್ನು ನೀಡಲಾಯಿತು.

ಬಿಹಾರಕ್ಕೆ ಎರಡು ರೈಲು ಸೌಲಭ್ಯ: ಲಾಕ್​ಡೌನ್​ನಿಂದ ರಾಜ್ಯದಲ್ಲಿ ಸಿಲುಕಿರುವ ವಲಸೆ ಕಾರ್ವಿುಕರನ್ನು ಕರೆದೊಯ್ಯಲು ಹುಬ್ಬಳ್ಳಿಯಿಂದ ಬಿಹಾರಕ್ಕೆ ಮೇ 20, 21 ರಂದು 2 ಶ್ರಮಿಕ ಎಕ್ಸ್​ಪ್ರೆಸ್ ರೈಲುಗಳು ಸಂಚರಿಸಲಿವೆ. ಬಿಹಾರಕ್ಕೆ 17ರಂದು ತೆರಳಬೇಕಿದ್ದ ಶ್ರಮಿಕ ಎಕ್ಸ್​ಪ್ರೆಸ್ ರೈಲು ತಾತ್ಕಾಲಿಕವಾಗಿ ರದ್ದಾಗಿತ್ತು. 17ರಂದು ಬಿಹಾರಕ್ಕೆ ತೆರಳುವುದಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನಗರಕ್ಕೆ ಶನಿವಾರ ಆಗಮಿಸಿದ್ದ ಕಾರ್ವಿುಕರಿಗೆ ವಿವಿಧ ಸೇವಾ ಕೇಂದ್ರಗಳಲ್ಲಿ ವಸತಿ ಸೌಲಭ್ಯ ಒದಗಿಸಲಾಗಿದೆ.

ದೇಹದ ತಾಪಮಾನದಲ್ಲಿ ಹೆಚ್ಚಳ: ಉತ್ತರ ಪ್ರದೇಶಕ್ಕೆ ತೆರಳಲು ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ 15ಕ್ಕೂ ಹೆಚ್ಚು ವಲಸೆ ಕಾರ್ವಿುಕರ ದೇಹದ ತಾಪಮಾನ ಹೆಚ್ಚಾದ ಕಾರಣ ಕೆಲ ಸಮಯ ನಿಲ್ದಾಣದೊಳಗೆ ಪ್ರವೇಶಿಸಲು ಅವರಿಗೆ ಅನುಮತಿ ನೀಡಲಿಲ್ಲ. ಎಲ್ಲ ಕಾರ್ವಿುಕರನ್ನು ನೆರಳಿನಲ್ಲಿ ಸುಮಾರು ಅರ್ಧ ಗಂಟೆ ಕೂರಿಸಿ, ಕುಡಿಯಲು ನೀರು ಕೊಡಲಾಯಿತು. ನಂತರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಪ್ರಭು ಬಿರಾದಾರ ನೇತೃತ್ವದಲ್ಲಿ ಕಾರ್ವಿುಕರನ್ನು ಮತ್ತೊಮ್ಮೆ ತಪಾಸಣೆಗೆ ಒಳಪಡಿಸಿದಾಗ ಅವರ ಶರೀರದ ತಾಪಮಾನ ಸಾಮಾನ್ಯ ಸ್ಥಿತಿಗೆ ಬಂದಿತ್ತು. ಆಗ ಅವರಿಗೆ ನಿಲ್ದಾಣದೊಳಗೆ ಪ್ರವೇಶ ನೀಡಲಾಯಿತು.

ಸಮಸ್ಯೆ ನಿವಾರಣೆ ನಂತರ ವಾಪಸು: ‘ಲಾಕ್​ಡೌನ್​ನಿಂದ ಒಪ್ಪೊತ್ತಿನ ಊಟಕ್ಕೂ ತೊಂದರೆಯಾಗಿತ್ತು. ಯಾವಾಗ ನಮ್ಮೂರಿಗೆ ತಲುಪುವೆವೋ ಎಂಬ ಚಿಂತೆ ಆಗಿತ್ತು. ದೇವರು ದೊಡ್ಡವ. ಕೊನೆಗೂ ನಮ್ಮ ಕೂಗು ಅವನಿಗೆ ಕೇಳಿಸಿತು. ಊರಿಗೆ ಹೋಗಲು ರೈಲಿನ ವ್ಯವಸ್ಥೆ ಆಯಿತು...’ ಗದಗನಲ್ಲಿ ರಸ್ತೆ ಬದಿ ಶೇವ್​ಪುರಿ ಮಾರಿ, ಸಂಸಾರ ಸಾಗಿಸುತ್ತಿದ್ದ ಉತ್ತರ ಪ್ರದೇಶದ ಸೀತಾಪುರ ನಗರ ಬಳಿಯ ಹಳ್ಳಿಯೊಂದರ ನಿವಾಸಿ ರವೀಂದ್ರಸಿಂಗ್ ಮಿಶ್ರಾ ಹೇಳಿದ ಮಾತಿದು. ಶ್ರಮಿಕ ಎಕ್ಸ್​ಪ್ರೆಸ್ ರೈಲಿನ ಮೂಲಕ ಕುಟುಂಬದೊಂದಿಗೆ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ರವೀಂದ್ರಸಿಂಗ್, ‘ವಿಜಯವಾಣಿ’ಯೊಂದಿಗೆ ಮಾತನಾಡಿದರು. ಕೆಲವು ಸಂಘಟನೆ ಆಹಾರ ಸಾಮಗ್ರಿ ನೀಡಿದ್ದರಿಂದ ಊಟ ಮಾಡುವಂತಾಯಿತು. ಉದ್ಯೋಗವಿಲ್ಲದೆ ಕುಟುಂಬ ನಡೆಸುವುದು ದುಸ್ತರವಾಗಿತ್ತು. ಊರಿಗೆ ಹೋದರೆ ಜೀವನ ನಡೆಯುತ್ತದೆ. ರೈಲು, ಬಸ್​ಗಳಿಲ್ಲದೆ ಊರಿಗೆ ಹೋಗಲು ಆಗಿದ್ದಿಲ್ಲ. ಈಗ ರೈಲು ಸೌಲಭ್ಯವಾಗಿದ್ದರಿಂದ ಚಿಂತೆ ದೂರವಾದಂತಾಗಿದೆ. ಲಾಕ್​ಡೌನ್ ಮುಗಿದು, ಸಮಸ್ಯೆ ನಿವಾರಣೆಯಾದ ನಂತರ ವಾಪಸು ಬರುತ್ತೇವೆ ಎಂದರು. ಕೊಪ್ಪಳ ಸ್ಟೀಲ್ ಪ್ಲಾ್ಯಂಟ್ ಉದ್ಯೋಗಿ ಸಚಿನ್ ಗುಪ್ತಾ, ಸ್ಟೀಲ್ ಪ್ಲಾ್ಯಂಟ್​ನಲ್ಲಿ ಕೆಲಸ ಇಲ್ಲ. ಊಟ, ಉಪಾಹಾರ ಸಿಗುತ್ತಿತ್ತು. ಮತ್ತೆ ಕೆಲಸ ಯಾವಾಗ ಆರಂಭವಾಗುತ್ತದೆಂದು ಗೊತ್ತಿರಲಿಲ್ಲ. ಕೆಲ ತಿಂಗಳು ಬಿಟ್ಟು ವಾಪಸು ಬರುತ್ತೇವೆ ಎಂದರು.

ವಲಸಿಗರಿಗೆ ವಸತಿ ವ್ಯವಸ್ಥೆ: ಉತ್ತರ ಪ್ರದೇಶಕ್ಕೆ ತೆರಳಲು ಧಾರವಾಡದಿಂದ ಬಂದಿದ್ದ 15ಕ್ಕೂ ಹೆಚ್ಚು ಕಾರ್ವಿುಕರಿಗೆ ಭಾನುವಾರ ರೈಲು ಏರಲು ಸಾಧ್ಯವಾಗಲಿಲ್ಲ. ಅವರಿಗೆ ಸೋಮವಾರದ ರೈಲ್ವೆಗೆ ಟಿಕೆಟ್ ನೀಡಲಾಗಿತ್ತು. ಗೊಂದಲಗೊಂಡಿದ್ದ ಅವರು ಭಾನುವಾರವೇ ಬಂದಿದ್ದರು. ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ಕಾರ್ವಿುಕರಿಗೆ ನೀಡಿದ್ದ ಭಾನುವಾರದ ಕೂಪನ್ ಅನ್ನು ಸೋಮವಾರಕ್ಕೆ ತಿದ್ದುಪಡಿ ಮಾಡಲಾಯಿತು. ರಾತ್ರಿ ಎಲ್ಲಿ ಕಳೆಯುವುದೆಂದು ಚಿಂತಿತರಾಗಿದ್ದ ಕಾರ್ವಿುಕರನ್ನು ಜಿಲ್ಲಾಡಳಿತ ವಸತಿ ಕೇಂದ್ರವೊಂದಕ್ಕೆ ಸ್ಥಳಾಂತರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net