

ಮೈಸೂರು: ದೆಹಲಿಯ ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಜಿಲ್ಲೆಯ ಮೂವರು ರ‌್ಯಾಂಕ್ ಪಡೆದುಕೊಂಡು ಗಮನ ಸೆಳೆದಿದ್ದಾರೆ.
ಕನ್ನಡ ಮಾಧ್ಯಮದ ಹುಡುಗಿ ಎ.ಸಿ.ಪ್ರೀತಿ 263, ರೈತ ಮಗ ಜೆ.ಭಾನು ಪ್ರಕಾಶ್ 523 ಮತ್ತು ಜಿ.ರಶ್ಮಿ 976ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
3ನೇ ಪ್ರಯತ್ನದಲ್ಲಿ ಗುರಿ ತಲುಪಿದ್ದಾರೆ. ಇವರು ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮದವರು. ಇವರ ತಂದೆ ಚನ್ನಬಸಪ್ಪ ರೈತ, ತಾಯಿ ನೇತ್ರಾವತಿ.
1ರಿಂದ 10ನೇ ತರಗತಿ ವರೆಗೂ ಅಂಕನಹಳ್ಳಿ ಸರ್ಕಾರಿ ಶಾಲೆಯಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದುಕೊಂಡಿದ್ದಾರೆ. ಬಳಿಕ ಮಂಡ್ಯದ ವಿಸಿ ಫಾರ್ಮ್‌ನಲ್ಲಿ ಕೃಷಿಯಲ್ಲಿ ಬಿಎಸ್‌ಸಿ ಪದವಿ ಸ್ನಾತಕ ಪದವಿ ಹಾಗೂ ದೆಹಲಿ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಸ್ನಾತಕೋತ್ತರ ಪದವಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿರುವೆ. ಕೃಷಿಯಲ್ಲೇ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವೆ. ಪಾಲಕರ ಉತ್ತೇಜನ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ.
ನಮ್ಮದು ಬಡ ರೈತ ಕುಟುಂಬ. ತಂದೆ ಕೃಷಿಯೊಂದಿಗೆ ಬಿಡುವಿನ ಸಂದರ್ಭದಲ್ಲಿ ಬಾಣಸಿಗರಾಗಿ ಮದುವೆ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿದ್ದರು. ಇದು ನನ್ನ ಸಾಧನೆಗೆ ಸ್ಫೂರ್ತಿ ಎಂದು ಹೆಮ್ಮೆಯಿಂದ ಹೇಳಿದರು.
ಉನ್ನತ ಶಿಕ್ಷಣ ಪೂರೈಸಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಠಿಣ ಸಿದ್ಧತೆ ನಡೆಸಿದೆ. ಹಣ ವ್ಯರ್ಥ ಮಾಡಬಾರದು ಎಂಬ ಕಾರಣಕ್ಕೆ ಕೋಚಿಂಗ್ ಸಹ ಪಡೆದುಕೊಳ್ಳಲಿಲ್ಲ.
ಹೈದ್ರಾಬಾದ್‌ನಲ್ಲಿ ಪಿಜಿ ರೂಮ್‌ನಲ್ಲಿ ಉಳಿದುಕೊಂಡು ಅಲ್ಲಿಯ ಗ್ರಂಥಾಲಯದಲ್ಲೇ ಓದಿಕೊಂಡು ಅಭ್ಯಾಸ ಮಾಡುತ್ತಿದ್ದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾದವರ ಸಲಹೆ ಪಡೆದು ಅಭ್ಯಾಸ ಯೋಜನೆ ರೂಪಿಸಿಕೊಂಡಿದ್ದೆ ಎಂದು ತಮ್ಮ ಅಭ್ಯಾಸ ವಿವರವನ್ನು ಹಂಚಿಕೊಂಡರು.
ಮೈಸೂರು ತಾಲೂಕಿನ ಬೆಳವಾಡಿಯ ಜೆ.ಭಾನುಪ್ರಕಾಶ್ 523ನೇ ರ‌್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಇವರು ಮೂಲತಃ ವೈದ್ಯರು ಎಂಬುದು ವಿಶೇಷ.
ರೈತ ಜಯರಾಮೇಗೌಡ ಹಾಗೂ ಅಂಗನವಾಡಿ ಶಿಕ್ಷಕಿ ಗಿರಿಜಮ್ಮ ದಂಪತಿ ಪುತ್ರರಾಗಿದ್ದಾರೆ. ಈಗಾಗಲೇ ಇವರು ಕರ್ನಾಟಕ ಕೇಡರ್ ಐಪಿಎಸ್‌ಗೆ ನಿಯೋಜನೆಗೊಂಡಿದ್ದಾರೆ.
ಯುಪಿಎಸ್‌ಸಿಯಲ್ಲಿ ಉತ್ತಮ ರ‌್ಯಾಂಕ್ ಪಡೆಯಲು ಭಗೀರಥ ಪ್ರಯತ್ನ ಮಾಡುತ್ತಿದ್ದು, 2022ರಲ್ಲಿ ನಡೆಸಿದ ಪರೀಕ್ಷೆಯಲ್ಲಿ 448ನೇ ರ‌್ಯಾಂಕ್ ಪಡೆದುಕೊಂಡಿದ್ದರು. 2023ರಲ್ಲಿ 600ನೇ ರ‌್ಯಾಂಕ್ ಗಳಿಸಿದ್ದರು.
ಈ ಸಲ 523ನೇ ರ‌್ಯಾಂಕ್ ದೊರೆತಿದೆ. ಹಿಂದಿನ ರ‌್ಯಾಂಕ್ ಆಧಾರದ ಮೇಲೆ ಹೈದ್ರಾಬಾದ್‌ನಲ್ಲಿ ಭಾರತೀಯ ಪೊಲೀಸ್ ಸೇವೆ ತರಬೇತಿಯನ್ನು ಪಡೆಯುತ್ತಿದ್ದಾರೆ. ಐಎಎಸ್ ಅಧಿಕಾರಿಯ ಆಗುವ ಛಲ ಬಿಟ್ಟಿಲ್ಲ. ಹೀಗಾಗಿ, ಮುಂದಿನ ಸಲ ಮತ್ತೆ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದಾರೆ.
ಇವರು ಬೆಳವಾಡಿ ಸರ್ಕಾರಿಯಲ್ಲಿ 1ರಿಂದ 5ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ. ಬಳಿಕ ಚಾಮರಾಜನಗರದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 6ರಿಂದ 12ನೇ ತರಗತಿವರೆಗೆ ಶಿಕ್ಷಣ ಪಡೆದರು. ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಬಳಿಕ ಹುಬ್ಬಳಿಯ ಕಿಮ್ಸ್ ಸಂಸ್ಥೆಯಲ್ಲಿ ಎಂಡಿ ಪಿಡಿಯಾಟ್ರಿಕ್ಸ್ ಸ್ನಾತಕೋತ್ತರ ಪದವಿ ಗಿಟ್ಟಿಸಿಕೊಂಡಿದ್ದಾರೆ.
‘ಐಪಿಎಸ್ ತರಬೇತಿಯೊಂದಿಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದೆ. 3ನೇ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದ ಸಂತೋಷ ಇದೆ. ಐಎಎಸ್ ಆಗುವ ಕನಸು ನನಸಾಗಿಲ್ಲ. ಈ ಗುರಿ ಸಾಧನೆಗಾಗಿ ಎಲ್ಲ ಪ್ರಯತ್ನ ಮಾಡಿರುವ ಸಂತೃಪ್ತಿಯಿದೆ. ಐಪಿಎಸ್ ತರಬೇತಿ ಅಕ್ಟೋಬರ್ ಹೊತ್ತಿಗೆ ಮುಕ್ತಾಯವಾಗಲಿದೆ. ಹುಟ್ಟಿದ ನಾಡಿನಲ್ಲೇ ಕರ್ತವ್ಯ ನಿರ್ವಹಿಸುವ ಅವಕಾಶ ದೊರೆತಿದೆ’ ಎಂದು ಭಾನು ಪ್ರಕಾಶ್ ಸಂತಸವನ್ನು ಹಂಚಿಕೊಂಡರು.
ಮೈಸೂರು ನಗರದ ದಟ್ಟಗಳ್ಳಿಯ ನಿವಾಸಿ, ಹಾಲಿ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಜಿ.ರಶ್ಮಿ ಅವರು 976ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ.
2022ರಲ್ಲಿ ಐಎಫ್‌ಎಸ್ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಪ್ರಸ್ತುತ ಒಡಿಶಾದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ 976ನೇ ರ‌್ಯಾಂಕ್ ಪಡೆದಿದ್ದಾರೆ. ಐಎಫ್‌ಎಸ್ ಅಧಿಕಾರಿಯಾಗಿಯೇ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ದಟ್ಟಗಳ್ಳಿಯ ಗಂಗರಾಮ್ ಹಾಗೂ ರತ್ಮಮ್ಮ ದಂಪತಿ ಪುತ್ರಿ. ಕುವೆಂಪುನಗರದ ಬಿಜಿಎಸ್ ಬಾಲಜಗತ್ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯು ಹಾಗೂ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ(ಸಿವಿಲ್) ಸ್ನಾತಕ ಪದವಿ ಪಡೆದುಕೊಂಡಿದ್ದಾರೆ