ಯುಪಿಎಸ್‌ಸಿ ತೇರ್ಗಡೆಯಾದ ಊರಿನ ಮೊಮ್ಮಗಳಿಗೆ ಸನ್ಮಾನ

ಯುಪಿಎಸ್‌ಸಿ ತೇರ್ಗಡೆಯಾದ ಊರಿನ ಮೊಮ್ಮಗಳಿಗೆ ಸನ್ಮಾನ
Published on

ಹಾಸನ: ದೇಶದ ಉನ್ನತ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿಯಲ್ಲಿ 345ನೇ ರ‌್ಯಾಂಕ್ ಪಡೆದ ಹಾಸನ ತಾಲೂಕಿನ ಹೆರಗು ಗ್ರಾಮದ ಮೊಮ್ಮಗಳಾದ ದಾಮಿನಿ ಮೋಹನ್ ದಾಸ್ ಅವರನ್ನು ಗ್ರಾಮಸ್ಥರು ಹಾಗೂ ಸಂಬಂಧಿಕರು ಇತ್ತೀಚೆಗೆ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಿದರು.

ದಾಮಿನಿ ಮೋಹನ್ ದಾಸ್ ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು, ಮಳೂರು ಪಟ್ಟಣ ನಿವಾಸಿಯಾಗಿದ್ದು, ಇವರು ಹೆರಗು ಗ್ರಾಮದ ಕೆಂಪೇಗೌಡ, ಹೊನ್ನಮ್ಮ, ಅವರ ಪುತ್ರಿ ಶೈಲಾ ಅವರ ಮಗಳಾಗಿದ್ದಾರೆ. ಸನ್ಮಾನ ಸ್ವೀಕರಿಸಿಮಾತನಾಡಿದ ದಾಮಿನಿ ಮೋಹನ್ ದಾಸ್, ನಾನು ಆಟ ಆಡಿಕೊಂಡು ಬೆಳೆದಿರುವ ಈ ಗ್ರಾಮದಲ್ಲಿ ನನ್ನನ್ನು ಸನ್ಮಾನಿಸಿ ಗೌರವಿಸುತ್ತಿರುವ ಜನರ ಪ್ರೀತಿಗೆ ತಾನು ಎಂದಿಗೂ ಚಿರಋಣಿಯಾಗಿದ್ದೇನೆ ಎಂದು ಹೇಳಿದರು.

ಕಳೆದ ಎರಡೂವರೆ ವರ್ಷಗಳ ಪ್ರಯತ್ನಕ್ಕೆ ಇಂದು ಫಲ ಸಿಕ್ಕಿದೆ. ನಾನು ಚನ್ನಪಟ್ಟಣ ತಾಲೂಕು ಮಳೂರು ಪಟ್ಟಣ ನಿವಾಸಿಯಾಗಿದ್ದು ನನ್ನ ಅಮ್ಮನ ತವರು ಮನೆಯಾದ ಹೆರಗು ಗ್ರಾಮಸ್ಥರು ನೀಡುತ್ತಿರುವ ಪ್ರೀತಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದ್ದೇನೆ. ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಪಿ ಪರೀಕ್ಷೆಯಲ್ಲಿ 345ನೇ ರ‌್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜನಸೇವೆ ಮಾಡುವ ಆಕಾಂಕ್ಷೆ ಹೊಂದಿದ್ದೇನೆ ಎಂದರು.

ಯುಪಿಎಸ್‌ಸಿ ಪರೀಕ್ಷೆ ಎದುರಿಸುವ ಕನಸು ಹೊಂದಿರುವ ಎಲ್ಲರೂ ತಮ್ಮ ಮನಸ್ಸಿನಲ್ಲಿ ಗುರಿ ಇಟ್ಟುಕೊಂಡು ಪ್ರಯತ್ನ ಮಾಡಬೇಕು. ಸತತ ಪರಿಶ್ರಮದಿಂದ ಫಲ ಸಿಗಲಿದೆ. ನಾನು ಈ ಹಂತಕ್ಕೆ ಬರಲು ಕುಟುಂಬ ಸದಸ್ಯರ ಸಹಕಾರ ಬಹಳ ಪ್ರಮುಖವಾಗಿದೆ. ಅವರಿಗೆ ಈ ಮೂಲಕ ಧನ್ಯವಾದ ತಿಳಿಸುವುದಾಗಿ ಹೇಳಿದರು.

ತಂದೆ ಮೋಹನ್ ದಾಸ್ ಮಾತನಾಡಿ, ಹೆರಗು ಗ್ರಾಮಸ್ಥರು ನಮ್ಮ ಮಗಳನ್ನು ಕರೆದು ಸನ್ಮಾನ ಮಾಡುತ್ತಿರುವುದು ಸಂತಸ ತಂದಿದೆ. ನನ್ನ ಮಗಳು ಬಡವರ ಪರ, ನೊಂದವರಿಗೆ ಧ್ವನಿಯಾಗಿ ಕೆಲಸ ಮಾಡಲಿ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲಿ. ಅವಳ ಎಲ್ಲಾ ಒಳ್ಳೆಯ ಕೆಲಸಗಳಿಗೆ ನಾನು ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

ಈ ವೇಳೆ ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಜಿಲ್ಲಾ ಶಸ್ತ್ರಚಿಕಿತ್ಸಕ ಕೃಷ್ಣಮೂರ್ತಿ, ಸಂಬಂಧಿಕರಾದ ಅಶೋಕ್, ಸಂತೋಷ್ ಬಾಬು, ವಾಸುದೇವ್, ಗಾಯತ್ರಿ ಮರಿಸ್ವಾಮಿ, ರುಕ್ಮಿಣಿ ರಾಮಕೃಷ್ಣಪ್ಪ, ರಾಧಮ್ಮ, ಸುಮಾ ದೇವರಾಜ್, ನಿಹಾರಿಕಾ ಸೇರಿದಂತೆ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net