

ಮಳಖೇಡ: ಮಳೆಯಿಂದ ಹಾನಿಗೊಳಗಾದ ಮನೆ, ಸರ್ಕಾರಿ ಕಟ್ಟಡ, ಬೆಳೆಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಾಕೀತು ಮಾಡಿದರು.
ಕಾಗಿಣಾ ಸೇತುವೆ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ನಿರಂತರವಾಗಿ ಸೇತುವೆ ಮುಳುಗಡೆ ಆಗುತ್ತಿರುವುದರಿಂದ ಜನರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಶೀಘ್ರ ನೂತನ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕೆಆರ್‌ಡಿಸಿಎಲ್ ಅಧಿಕಾರಿಗಳಿಗೆ ಕರೆ ಮಾಡಿ ಸೂಚನೆ ನೀಡಿದರು.
ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಟ್ಟಡ ನೆಲಸಮ ಮಾಡಲಾಗಿದ್ದು, ಹೀಗಾಗಿ ಇವರೆಲ್ಲರೂ ಹೊಟೇಲ್‌ನಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಡಿಸಿ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿ ಕೂಡಲೇ ಕಟ್ಟಡ ಕಾಮಗಾರಿ ಕೈಗೊಳ್ಳುವಂತೆ ತಹಸೀಲ್ದಾರ್‌ಗೆ ತಿಳಿಸಿದರು.
ಬಳಿಕ ಸಂಗಾವಿ (ಎಂ) ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್ ವೀಕ್ಷಿಸಿದರು. ಎಸಿ ಆಶಪ್ಪ ಪೂಜಾರಿ, ತಹಸೀಲ್ದಾರ್ ಶಿವರಾಜ ಶಿವಪುರ, ತಾಪಂ ಇಒ ಚನ್ನಪ್ಪ ರಾಯಣ್ಣನವರ್, ಗ್ರೇಡ್-2 ತಹಸೀಲ್ದಾರ್ ಸಿದ್ರಾಮ ನಾಚವಾರ, ಬಿಇಒ ವಿಜಯಕುಮಾರ ಜಮಖಂಡಿ, ಸಹಾಯಕ ಕೃಷಿ ನಿರ್ದೇಶಕ ಹಂಪಣ್ಣ, ಸಿಡಿಪಿಒ ರವಿರಾಜ್, ಕಂದಾಯ ನಿರೀಕ್ಷಕ ರವೀಂದ್ರನಾಥ, ಗ್ರಾಮ ಆಡಳಿತ ಅಧಿಕಾರಿ ಚಂದ್ರಕಾAತ ಭಾವೆ ಇತರರಿದ್ದರು.