ಯುದ್ಧಕ್ಕೆ ಮುನ್ನ ಎನ್ಸಿಪಿ ಶಸ್ತ್ರತ್ಯಾಗ !

M.G. Mule
Published on

ಬಸವಕಲ್ಯಾಣ: ಮರಾಠಾ ಸಮುದಾಯದವರ ಪ್ರಭಾವ ಹೊಂದಿರುವ ಕ್ಷೇತ್ರದಲ್ಲಿ ಹವಾ ಸೃಷ್ಟಿಸುವ ಉಮೇದಿನಲ್ಲಿದ್ದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ), ಯುದ್ಧಕ್ಕೆ ಮುನ್ನವೇ ಶಸ್ತ್ರ ತ್ಯಾಗ ಮಾಡಿದೆ. ಮರಾಠಾ ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಎಂ.ಜಿ. ಮುಳೆ ಅವರು ಪಕ್ಷದಿಂದ ಸಲ್ಲಿಸಿದ್ದ ನಾಮಪತ್ರ ಶನಿವಾರ ವಾಪಸ್ ಪಡೆದು ಅಚ್ಚರಿ ಮೂಡಿಸಿದ್ದಾರೆ.

ನಾನಾ ಲೆಕ್ಕಾಚಾರಗಳೊಂದಿಗೆ ಎಂ.ಜಿ. ಮುಳೆ ಅವರು ಒಂದು ವಾರದ ಹಿಂದಷ್ಟೇ ಜೆಡಿಎಸ್ ತೊರೆದು ಶರದ್ ಪವಾರ್ ನೇತೃತ್ವದ ಎನ್ಸಿಪಿ ಸೇರಿದ್ದರು. ನಾಮಪತ್ರ ಸಲ್ಲಿಕೆಯ ಕೊನೇ ದಿನ(ಮಾ. 30ರಂದು) ಪಕ್ಷದಿಂದ ಅಖಾಡಕ್ಕೆ ಇಳಿಯುವ ನಿರ್ಣಯ ಕೈಗೊಂಡು, ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ ನಾಮಪತ್ರ ವಾಪಸ್ ಪಡೆಯುವ ಕಡೆಯ ದಿನವಾಗಿದ್ದ ಶನಿವಾರ, ಇವರು ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಇವರ ಈ ನಡೆ ಸಾಕಷ್ಟು ಚರ್ಚೆ ಜತೆಗೆ ನಾನಾ ರೀತಿಯ ಊಹಾಪೋಹಕ್ಕೆ ಕಾರಣವಾಗಿದೆ.

ಮುಳೆ ಬಸವಕಲ್ಯಾಣದ ಹಿರಿಯ ರಾಜಕಾರಣಿ. 1985ರಿಂದ ಈವರೆಗೆ 7 ಸಲ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಒಮ್ಮೆ ಗೆದ್ದಿದ್ದಾರೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ ಸುತ್ತಾಡಿದ ಅವರು, ತರಾತುರಿಯಲ್ಲಿ ಎನ್ಸಿಪಿ ಸೇರಿದ್ದರು. ನಾಮಪತ್ರ ಸಲ್ಲಿಸಿ ನಂತರ ಹಿಂಪಡೆದಿರುವ ಬೆಳವಣಿಗೆ ಗಮನಾರ್ಹ ಎನಿಸಿದೆ. ಕಣದಿಂದ ಹಿಂದೆ ಸರಿಯುವುದೇ ಇದ್ದಲ್ಲಿ ಪಕ್ಷಕ್ಕೆ ಸೇರಿ,ನಾಮಪತ್ರ ಸಲ್ಲಿಸುವ ಅಗತ್ಯವಾದರೂ ಏನಿತ್ತು ಎನ್ನುವ ಪ್ರಶ್ನೆ ಎದ್ದಿವೆ. ಎನ್ಸಿಪಿ ಮುಖಂಡರೇ ಇವರ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಳೆ ಅವರಿಗೆ ವಯಸ್ಸಾಗಿದೆ. ಹೀಗಾಗಿ ತಮ್ಮ ನಿರ್ಧಾರ, ನಡೆ ಹೇಗಿರಬೇಕೆಂದು ಅವರಿಗೆ ಗೊತ್ತಾಗುತ್ತಿಲ್ಲ ಎಂದು ಛೇಡಿಸಿದ್ದಾರೆ.

ಮುಳೆ ಅಖಾಡದಲ್ಲಿರುವುದು ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಅವರಿಗೆ ತಲೆನೋವಾಗಿತ್ತು. ಮರಾಠಾ ಮತಗಳ ವಿಭಜನೆಯ ಚಿಂತೆ ಹೆಚ್ಚಿಸಿತ್ತು. ಹೀಗಾಗಿ ಕಮಲ ನಾಯಕರು ಕೊನೆಯ ಗಳಿಗೆವರೆಗೆ ಮುಳೆ ಅವರೊಂದಿಗೆ ನಡೆಸಿರುವ ಮಾತುಕತೆ ಫಲಪ್ರದವಾಗಿದೆ. ಇದು ಬಂಡಾಯ, ಭಿನ್ನಮತದ ಒಳ ಬೇಗುದಿಯಲ್ಲಿ ಹೈರಾಣಾಗಿರುವ ಕೇಸರಿ ಪಡೆಗೆ ಒಂದಿಷ್ಟು ನೆಮ್ಮದಿ ಮೂಡಿಸಿದೆ. ಮುಳೆ ಅವರು ಶೀಘ್ರವೇ ಮತ್ತೆ ಬಿಜೆಪಿ ಸೇರುವುದು ಬಹುತೇಕ ಖಚಿತ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಮುಖಂಡರು ನಡೆಸಿದ ಸಂಧಾನದ ಫಲವಾಗಿ ಮುಳೆ ಕಣದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಮುಳೆ ಅವರಿಗೆ ಸಕಲ ಮರಾಠಾ ಸಮಾಜ ಬೆಂಬಲ ನೀಡುವ ಬಗ್ಗೆ ಶುಕ್ರವಾರವೇ ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದಾದ ಒಂದು ದಿನದ ನಂತರ ಮುಳೆ ಬಿಜೆಪಿಗೆ ಶರಣಾಗಿದ್ದಾರೆ. ಹೀಗಾಗಿ ಮರಾಠಾ ಸಮಾಜವು ಇವರಿಗೆ ಹಿಂಬಾಲಿಸುವುದೆ ಅಥವಾ ಅನ್ಯಪಕ್ಷದ ಕಡೆ ವಾಲುವುದೇ ಎನ್ನುವುದು ಕಾದು ನೋಡಬೇಕು.

ಸಿಎಂ ಕೊಟ್ಟ ಭರವಸೆಯಿಂದ
ನಾಮಪತ್ರ ಹಿಂಪಡೆದಿರುವೆ
ರಾಜ್ಯದಲ್ಲಿರುವ ಮರಾಠಾ ಸಮಾಜದ ಪ್ರಗತಿಗಾಗಿ ಮಂಡಿಸಿದ 6 ಪ್ರಮುಖ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವುದಾಗಿ ಸಿಎಂ ಯಡಿಯೂರಪ್ಪ ಅವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಉಪ ಚುನಾವಣೆ ಕಣದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಮಾಜಿ ಶಾಸಕ ಎಂ.ಜಿ.ಮುಳೆ ತಿಳಿಸಿದ್ದಾರೆ. ಮರಾಠಾ ಸಮಾಜವನ್ನು ಪ್ರವರ್ಗ 2ಎ ಗೆ ಸೇರಿಸುವುದು, ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿ 6 ಪ್ರಮುಖ ಬೇಡಿಕೆ ಶೀಘ್ರದಲ್ಲಿ ಈಡೇರಿಸುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ನಾನು ಎನ್ಸಿಪಿಯಿಂದ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆದಿದ್ದೇನೆ. ನನಗೆ ಅಧಿಕಾರ, ಪಕ್ಷ, ರಾಜಕಾರಣಕ್ಕಿಂತ ಸಮಾಜವೇ ಮುಖ್ಯ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net