

ಮೈಸೂರು: ಜಗತ್ತಿನ ಯಾವ ಭಾಗದಲ್ಲಿ ಯುದ್ಧ ನಡೆದರೂ ಅದರ ಪರಿಣಾಮವನ್ನು ನಾವೆಲ್ಲರೂ ಅನುಭವಿಸಬೇಕಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ, ಲೇಖಕ ಪ್ರೊ.ಸಿ. ನಾಗಣ್ಣ ಕಳವಳ ವ್ಯಕ್ತಪಡಿಸಿದರು.
ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಮಹದೇವ್ ಅವರು ಎಡ್ವಿನ್ ಆರ್ನಾಲ್ಡ್ ಅವರ ಮೇರುಕೃತಿ ದಿ ಲೈಟ್ ಆಫ್ ಏಷಿಯಾ ಕನ್ನಡ ಅನುವಾದ ಏಷ್ಯಾದ ಬೆಳಕು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
2024ರ ಕೊನೆಯ ಹೊತ್ತಿನಲ್ಲಿ ಪ್ರಪಂಚದ ಹಲವು ಕಡೆ ಯುದ್ಧ ಸನ್ನದ್ಧ ಸ್ಥಿತಿ ಇದೆ. ಗಾಜಾ, ಲೆಬನಾನ್, ಊಕ್ರೇನ್, ಸುಡಾನ್ ಮುಂತಾದ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿದೆ. ದಕ್ಷಿಣ ಕೊರಿಯಾ ಕ್ಷಿಪ್ರಕ್ರಾಂತಿಯಿಂದ ತಪ್ಪಿಸಿಕೊಂಡಿತು.
ಸಿರಿಯಾದಲ್ಲಿ ಕ್ಷಿಪ್ರಕ್ರಾಂತಿಗೆ ಒಳಗಾಯಿತು. ಜಗತ್ತಿನ ಹಲವೆಡೆ ಕೋಪ, ತಾಪಗಳಿಂದ 3ನೇ ಮಹಾಯುದ್ಧಕ್ಕೆ ನಾಂದಿಯಾಗುತ್ತಿದೆ. ಇದರ ಪರಿಣಾಮ ಘೋರ. ಬುದ್ಧ ಗುರುವಿನ ಕೃಪೆಯಿಂದ ಯುದ್ಧ ಸನ್ನದ್ಧತೆ ದೂರಾಗಲಿ ಎಂದರು.
ಕನ್ನಡ ಮತ್ತು ಕರ್ನಾಟಕಕ್ಕೆ ಈ ಹೊತ್ತು ಅನುವಾದದ ಸುಗ್ಗಿ ಕಾಲ. ಪ್ರೊ.ಒ.ಎಲ್.ನಾಗಭೂಷಣಸ್ವಾಮಿ ಫ್ಯೂದೋರ್ ದಾಸ್ತೋವ್ಸ್‌ಕಿಯ ಅಪರಾಧ ಮತ್ತು ಶಿಕ್ಷೆ, ವನಮಾಲ ವಿಶ್ವನಾಥ್ ಅವರ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಡಿವಿಜಿ ಮೊಮ್ಮಗ ನಟರಾಜನ್ ಅವರ ಕಗ್ಗ, ಅವರ ಪತ್ನಿ ಬಿಜಿಎಲ್ ಸ್ವಾಮಿ ಅವರ ಹಸಿರು ಹೊನ್ನು, ಪ್ರೊ.ಡಿ.ಎ. ಶಂಕರ್ ಅವರು ಮ್ಯಾಕ್ಸ್ ಮುಲ್ಲರ್ ಧಮ್ಮ ಪದವನ್ನು ಅನುವಾದಿಸಿದ್ದಾರೆ ಎಂದರು.
ಪ್ರೊ.ಮಹದೇವ್ ಅವರು ಏಷ್ಯಾದ ಬೆಳಕು ಕೃತಿಯನ್ನು ಕನ್ನಡ ತರಬೇಕಾದ್ದು ಮಾಡಲೇಬೇಕಿದ್ದ ಕೆಲಸವಾಗಿತ್ತು. ಮೂಲ ಓದುವಾಗ ಅನುಭವಿಸುವುದನ್ನು ಅನುವಾದದಲ್ಲಿಯೂ ಪಡೆಯಬಹುದು. ಅಂತರಂಗ ಮೆಚ್ಚುವಂತೆ ಬರೆದು ಕೃತಾರ್ಥರಾಗಿದ್ದಾರೆ ಎಂದರು.
ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಸುಮಿತ್ರಾ ಬಾಯಿ ಮಾತನಾಡಿ, ಜಗತ್ತಿನ ಎಲ್ಲ ಧರ್ಮಗಳಿಗೂ ಬೌದ್ಧ ಧಮ್ಮದ ಪ್ರಭಾವ ಇದೆ. 12ನೇ ಶತಮಾನದಲ್ಲಿ ಶರಣರು ಕಾಯಕವೇ ಕೈಲಾಸ ಎನ್ನಲು ಬುದ್ಧರ ಪ್ರೇರಣೆ ಇದೆ. ಧಮ್ಮವನ್ನು ಸ್ವೀಕರಿಸಿದ ಅಂಬೇಡ್ಕರ್ ಬೌದ್ಧ ಧಮ್ಮವನ್ನು ಪುನುರುತ್ಥಾನಗೊಳಿಸಿದರು. ಊನಗೊಂಡ ಸಮಾಜದ ಚಿಕಿತ್ಸೆಯ ಮಾರ್ಗವಾಗಿಯೂ ಬಳಸಿದರು ಎಂದು ತಿಳಿಸಿದರು.
2 ವರ್ಷಗಳ ಕಾಲ ಭಾರತದಲ್ಲಿದ್ದ ಆರ್ನಲ್ಡ್ ಅವರು ಅಧ್ಯಾತ್ಮಿಕ, ಸೃಜನಶೀಲ ಮತ್ತು ಶ್ರದ್ಧಾಭಕ್ತಿಯಿಂದ ವಿನೀತವಾಗಿ ಬುದ್ಧರ ಕುರಿತು ಬರೆದಿದ್ದಾರೆ. ಏಷ್ಯಾದ ಬೆಳಕು ಕೃತಿಯನ್ನು ಓದುವಾಗ ಆರ್ನಲ್ಡ್ ಅವರ ಬೌದ್ಧಿಕ ಮಟ್ಟ ಎಷ್ಟು ಶ್ರೇಷ್ಠವಾಗಿತ್ತು ಎಂಬುದು ನಮ್ಮ ಅರಿವಿಗೆ ಬರುತ್ತದೆ ಎಂದು ಹೇಳಿದರು.
ಬುದ್ಧರ ತಿರುಳು ಸೈರಣೆ ಮತ್ತು ಕರುಣೆ. ಇವರೆಡನ್ನೂ ಹೊಂದಿದವರ ಬದುಕು ಮಹಾ ಬೆಳಗಿನಿಂದ ಪ್ರಜ್ವಲಿಸುತ್ತದೆ. ಏಷ್ಯಾದ ಬೆಳಕು ಕನ್ನಡ ಕೃತಿಯೂ ಕನ್ನಡದ ಔನ್ನತ್ಯವನ್ನು ಹೆಚ್ಚಿಸುತ್ತದೆ. ಈ ಕೃತಿ ಓದು ಅನುಭಾವತ್ಮಾಕ ಎಂದರು.
ಲೇಖಕ ಡಾ.ಮಹದೇವ್ ಮಾತನಾಡಿ, ಅರ್ನಾಲ್ಡ್ ಅವರ ಕೃತಿಯೂ ಯುರೋಪಿನ ಅನೇಕ ಭಾಷೆಗಳು, ದಕ್ಷಿಣ ಭಾರತದ ಭಾಷೆಗಳಿಗೆ ಅನುವಾದಗೊಂಡಿದೆ. ಅನುವಾದಕ್ಕೆ 7 ವರ್ಷ ತೆಗೆದುಕೊಂಡಿದ್ದೇನೆ. ನನ್ನ ಕನಸು ಪೂರ್ಣಗೊಂಡಿದೆ ಎಂದು ಹೇಳಿದರು. ಎಡ್ವಿನ್ ಆರ್ನಾಲ್ಡ್ ಮೊಮ್ಮಗ ಮೊಹಮ್ಮದ್ ಮೈಕಲ್ ಅರ್ನಾಲ್ಡ್ ಕೃತಿ ಬಿಡುಗಡೆ ಮಾಡಿದರು. ಹಿರಿಯ ಲೇಖಕ ಪ್ರೊ.ಡಿ.ಎ. ಶಂಕರ್ ಅಧ್ಯಕ್ಷತೆ ವಹಿಸಿದ್ದರು.
ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದಲ್ಲಿ ನುರಿತ ಪ್ರಾಧ್ಯಾಪಕರಿಲ್ಲ ಎಂದು ಪ್ರೊ.ಮಹದೇವ್ ಕಳವಳ ವ್ಯಕ್ತಪಡಿಸಿದರು.
ಈಗ ಯು.ಆರ್. ಅನಂತಮೂರ್ತಿ, ಸಿ.ಡಿ.ನರಸಿಂಹಯ್ಯ ಮುಂತಾದವರು ಮಾನಸಗಂಗೋತ್ರಿ ಆವರಣದಲ್ಲಿ ಗ್ರೀಕ್ ನಾಟಕಗಳ ಭೂತಗಳಂತೆ ಓಡಾಡುತ್ತ ಪರಿತಪಿಸುತ್ತಿದ್ದಾರೆ ಎನಿಸುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಿಕರೊಬ್ಬರು ಇಂಗ್ಲಿಷ್ ಅಧ್ಯಯನ ವಿಭಾಗ ಮಾತ್ರವಲ್ಲದೇ ಎಲ್ಲ ವಿಭಾಗಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಅಭಿಪ್ರಾಯಪಟ್ಟರು. ಇದನ್ನು ಸಮ್ಮತಿಸಿ ಮಾತು ಮುಂದುವರಿಸಿದ ಪ್ರೊ.ಮಹದೇವ್ ಅವರು, ಸರ್ಕಾರ ಶೀಘ್ರ ನುರಿತ ಅನುಭವಿ ಪ್ರಾಧ್ಯಾಪಕರನ್ನು ನೇಮಿಸಬೇಕು ಎಂದು ಹೇಳಿದರು.