

ಎಸ್.ವೆಂಕಟರಾಜು ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವಿವಿಧ ರೀತಿಯ ಅಂಗವೈಕಲ್ಯಗಳಿಂದ ಬಳಲುತ್ತಿರುವವರ ಸಂಕಷ್ಟ ಹೇಳ ತೀರದಾಗಿದೆ. ತಿಂಗಳಿಗೊಮ್ಮೆ ನಡೆಯುವ ಟೆಸ್ಟ್ ಕ್ಯಾಂಪ್‌ನಲ್ಲಿ ಅಂಗವಿಕಲರಿಗೆ ಅಂಗವೈಕಲ್ಯ ಪ್ರಮಾಣದ ಪರೀಕ್ಷೆ ನಡೆಸದೆ ವೈದ್ಯಾಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ತಿಂಗಳಿಗೊಮ್ಮೆ ಮಾತ್ರ ಟೆಸ್ಟ್ ಕ್ಯಾಂಪ್..? ಕಣ್ಣು, ಕಿವಿ, ಕಾಲು, ಸುಟ್ಟಗಾಯ, ಹೀಗೆ ವಿವಿಧ ಅಂಗವೈಕಲ್ಯಗಳಿಂದ ಬಳಲುತ್ತಿರುವವರಿಗೆ ಅವರ ಅಂಗವೈಕಲ್ಯ ಪ್ರಮಾಣ ಗುರುತಿಸಲು ತಿಂಗಳಿಗೊಮ್ಮೆ ಪರೀಕ್ಷಾ ಕ್ಯಾಂಪ್ ಆಯೋಜಿಸಲಾಗುತ್ತದೆ. ಈ ಕ್ಯಾಂಪ್‌ನಲ್ಲಿ ತಾಲೂಕಿನ ಎಲ್ಲ ಅಂಗವಿಕಲರು ಪಾಲ್ಗೊಂಡು ಪರೀಕ್ಷೆಗೆ ಒಳಪಡುತ್ತಾರೆ. ಆದರೆ ಕಳೆದ ನಾಲ್ಕೈದು ತಿಂಗಳಿಂದ ಟೆಸ್ಟ್ ಕ್ಯಾಂಪ್‌ಗೆ ಬರುವ ಅಂಗವಿಕಲರನ್ನು ವೈದ್ಯರು ಯಾವುದೇ ಪರೀಕ್ಷೆಗಳಿಗೆ ಒಳಪಡಿಸಿಲ್ಲ. ತಿಂಗಳಿಗೊಮ್ಮೆನಡೆಯುವ ಈ ಕ್ಯಾಂಪ್‌ಗೆ ವೈದ್ಯರೇ ಬರುವುದಿಲ್ಲ. ದಿನವೆಲ್ಲಾ ಕಾದು ಕಾದು ಸುಸ್ತಾಗುವ ಅಂಗವಿಕಲರು ತಮ್ಮ ಗ್ರಾಮಗಳಿಗೆ ಹಾಗೆಯೇ ಮರಳುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಂಗವಿಕಲರು ವಿಜಯವಾಣಿ ಬಳಿ ಅಳಲು ತೋಡಿಕೊಂಡಿದ್ದಾರೆ.
ಹಣ ಕೊಟ್ಟವರಿಗೆ ಸಿಗುವ ಐಡಿ: ಹಣ ಕೊಟ್ಟವರಿಗೆ ಮಾತ್ರ ಅಂಗವೈಕಲ್ಯ ಪ್ರಮಾಣದ ಪರೀಕ್ಷೆ ಸಲೀಸಾಗಿ ನಡೆಯುತ್ತದೆ. ಇಲ್ಲದಿದ್ದರೆ ದಿನವಿಡೀ ಕಾದರೂ ವೈದ್ಯರು ಬರುವುದಿಲ್ಲ. ನಮ್ಮನ್ನು ಪರೀಕ್ಷಿಸುವುದೂ ಇಲ್ಲ ಎಂದು ಅಂಗವಿಕಲರು ಅಲವತ್ತುಕೊಂಡರು.
ಏನಿದು ಯುಡಿಐಡಿ ಕಾರ್ಡ್..? ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಂಗವಿಕಲರಿಗೆ ವಿವಿಧ ಯೋಜನೆಗಳಡಿ ಹಲವು ಸೌಲಭ್ಯಗಳನ್ನು ಒದಗಿಸುತ್ತವೆ. ಈ ಸೌಲಭ್ಯಗಳನ್ನು ಪಡೆಯಲು ಯುಡಿಐಡಿ ಕಾರ್ಡ್ ಅಗತ್ಯವಾಗಿದೆ. ಉದಾಹರಣೆಗೆ ಪಿಂಚಣಿ ಸೌಲಭ್ಯ, ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಾಧನ ಸಲಕರಣೆ, ಸಬ್ಸಿಡಿಸಹಿತ ಸಾಲ ಸೌಲಭ್ಯ, ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಹೀಗೆ ನಾನಾ ಸೌಲಭ್ಯಗಳನ್ನು ಪಡೆಯಲು ಈ ಕಾರ್ಡ್ ಬೇಕಾಗುತ್ತದೆ.
ಅಂಗವೈಕಲ್ಯ ಪ್ರಮಾಣ ನಿರ್ಧರಿಸಲು ಸರ್ಕಾರಿ ಆಸ್ಪತ್ರೆಯಲ್ಲಿ ತಿಂಗಳಿಗೊಮ್ಮೆ ಟೆಸ್ಟ್ ಕ್ಯಾಂಪ್ ಮಾಡಲಾಗುತ್ತದೆ. ಈ ಕ್ಯಾಂಪ್‌ನ ದಿನಾಂಕ, ವೇಳೆ ಎಲ್ಲವೂ ಮುಂಚಿತವಾಗಿಯೇ ತಿಳಿದಿದ್ದರೂ ವೈದ್ಯರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ನಾವು ವಿವಿಧ ಗ್ರಾಮಗಳಿಂದ ಬಂದು ದಿನವಿಡೀ ಕಾದರೂ ಪ್ರಯೋಜನವಿಲ್ಲ. ಹಣ ಕೊಟ್ಟವರಿಗೆ ಮಾತ್ರ ಸಲೀಸಾಗಿ ಕಾರ್ಡ್ ಮಾಡಿಕೊಡಲಾಗುತ್ತದೆ. ಈ ವಿಷಯವನ್ನು ಜಿಲ್ಲಾಧಿಕಾರಿ ಸೇರಿ ವಿವಿಧ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನವಾಗಿಲ್ಲ. ಶಿವಕುಮಾರಿ, ಗ್ರಾಮ ಪ್ರತಿನಿಧಿ ನೌಕರ ದೊಡ್ಡಬಳ್ಳಾಪುರ ಅಂಗವಿಕಲರ ಸಮಸ್ಯೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕೆಲ ವೈದ್ಯರನ್ನು ಕೊವಿಡ್ ಕೆಲಸಕ್ಕೆ ಕಳಿಸಲಾಗಿತ್ತು. ಹೀಗಾಗಿ ಇಂತಹ ಸಮಸ್ಯೆ ಎದುರಾಗಿರಬಹುದು. ಈ ಬಗ್ಗೆ ಕೂಡಲೇ ಕ್ರಮ ವಹಿಸಿ ಸಮಸ್ಯೆಯಾಗದಂತೆ ಎಚ್ಚರ ವಹಿಸುತ್ತೇನೆ. ಡಾ.ರಮೇಶ್ ಮುಖ್ಯವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ ದೊಡ್ಡಬಳ್ಳಾಪುರ