ಯುಜಿಸಿಯಿಂದ ಅಪಾಯಕಾರಿ ನಿಯಮ: ಎಐಡಿಎಸ್‌ಒ ಆತಂಕ

UGC
Published on

ಮೈಸೂರು: ಶಿಕ್ಷಣ ಕ್ಷೇತ್ರದಿಂದ ಹೊರತಾಗಿರುವವರನ್ನು ವಿಶ್ವವಿದ್ಯಾಲಯಗಳ ಕುಲಪತಿಗಳನ್ನಾಗಿ ಮಾಡುವ ಅಪಾಯಕಾರಿ ನಿಯಮವನ್ನು ಯುಜಿಸಿಯು ರೂಪಿಸಿದೆ ಎಂದು ಎಐಡಿಎಸ್‌ಒ ಆತಂಕ ವ್ಯಕ್ತಪಡಿಸಿದೆ

ಯುಜಿಸಿ ರೂಪಿಸಿರುವ ಹೊಸ ಕರಡು ನಿಯಮಗಳ ಪ್ರಕಾರ, ಉದ್ಯಮ, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಅನುಭವದ ಜತೆಗೆ ಶೈಕ್ಷಣಿಕವಾಗಿ ಮಹತ್ವದ ಕೊಡುಗೆ ನೀಡಿದವರನ್ನು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮಾಡಬಹುದು ಎಂದು ಹೇಳಲಾಗಿದೆ.

ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಮತ್ತು ಪ್ರಜಾತಾಂತ್ರಿಕ ಹಕ್ಕನ್ನು ಕಸಿದು ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿರದ, ಕೇವಲ ಲಾಭ-ನಷ್ಟದ ಲೆಕ್ಕಾಚಾರ ಮಾಡಬಲ್ಲ ಉದ್ಯಮಿಗಳು, ಅಧಿಕಾರಗಳು ಮತ್ತು ಸರ್ಕಾರದ ಹೌದಪ್ಪಗಳ ಕೈಯಲ್ಲಿ ವಿಶ್ವವಿದ್ಯಾಲಯದ ಆಡಳಿತವನ್ನು ಒಪ್ಪಿಸುವ ಹುನ್ನಾರ ಇದಾಗಿದೆ ಎಂದು ಸಂಘಟನೆ ಜಿಲ್ಲಾ ಕಾರ್ಯದರ್ಶಿ ನಿತಿನ್ ಪ್ರಕಟಣೆಯಲ್ಲಿ ದೂರಿದ್ದಾರೆ.

ಸರ್ಕಾರದ ಈ ಅಪ್ರಜಾತಾಂತ್ರಿಕ ಮತ್ತು ಕಡು ಶಿಕ್ಷಣ ವಿರೋಧಿ ನಡೆ ಖಂಡನೀಯ. ಎಂಇ ಅಥವಾ ಎಂ.ಟೆಕ್‌ನಲ್ಲಿ ಕನಿಷ್ಠ ಶೇ.55 ಅಂಕ ಪಡೆದವರಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ನೀಡಿ ನೇರವಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡುವ ನಿಯಮವನ್ನು ಕೂಡ ಕರಡಿನಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ

ಯುಜಿಯು ಕೂಡಲೇ ಈ ಅಪ್ರಜಾತಾಂತ್ರಿಕ ಕರಡನ್ನು ಹಿಂಪಡೆಯಬೇಕು. ಪ್ರಾಧ್ಯಾಪಕ ಹುದ್ದೆಯ ಕನಿಷ್ಠ 10 ವರ್ಷಗಳ ಅನುಭವ, ಆಡಳಿತಾತ್ಮಕ ಹುದ್ದೆಯ ಅನುಭವದ ಆಧಾರದ ಈಗಿನ ಮಾನದಂಡವನ್ನೇ ಮುಂದುವರಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net