

ವಿಜಯಪುರ: ಯುಜಿಸಿ ನಿಯಮಾವಳಿ ಉಲ್ಲಂಘಿಸಿ ಅವೈಜ್ಞಾನಿಕವಾಗಿ ಪರೀಕ್ಷೆ ನಡೆಸಲು ಮುಂದಾಗಿರುವ ವಿಶ್ವ ವಿದ್ಯಾಲಯಗಳ ಕ್ರಮಕ್ಕೆ ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಶುಕ್ರವಾರ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ಪರೀಕ್ಷೆ ರದ್ದುಗೊಳಿಸಲು ಆಗ್ರಹಿಸಿ ನೂರಾರು ವಿದ್ಯಾರ್ಥಿನಿಯರು ಧರಣಿ ಆರಂಭಿಸಿದರು.
ಆ.31, 2021 ರೊಳಗೆ ವಿಶ್ವ ವಿದ್ಯಾಲಯಗಳು ಅಂತಿಮ ವರ್ಷದ ಪರೀಕ್ಷೆ ಪೂರ್ಣಗೊಳಿಸಲು ಯುಜಿಸಿ ಸೂಚಿಸಿದೆ. ಈ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಿ ಆಂತರಿಕ ಮೌಲ್ಯಮಾಪನದ ಮೇರೆಗೆ ಬಡ್ತಿ ನೀಡಲು ತಿಳಿಸಲಾಗಿದೆ. ಅದಾಗ್ಯೂ ವಿಶ್ವ ವಿದ್ಯಾಲಯಗಳು ತಿಂಗಳ ಅಂತರದಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸಲು ಮುಂದಾಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚಾಗಿದೆ. ಮಾನಸಿಕವಾಗಿ ಕುಗ್ಗಿದ್ದಾರೆ. ಕೂಡಲೇ ಬೆಸ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಿ ಅಂತಿಮ ವರ್ಷದ ಪರೀಕ್ಷೆಯನ್ನಾದರೂ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ವಿದ್ಯಾರ್ಥಿನಿಯರು ಒತ್ತಾಯಿಸಿದರು.
ಕರೊನಾ ಹಿನ್ನೆಲೆ ಈಗಾಗಲೇ ಶೈಕ್ಷಣಿಕ ವರ್ಷಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ. ಇನ್ನೂ ಕರೊನಾ ಆತಂಕದಿಂದ ವಿದ್ಯಾರ್ಥಿನಿಯರು ಹೊರಬಂದಿಲ್ಲ. ಅಲ್ಲದೇ ಬೆಸ ಸೆಮಿಸ್ಟರ್ ಪರೀಕ್ಷೆಗಳು ಮುಂದೂಡಲಾಗಿದ್ದು ಸಾಕಷ್ಟು ವಿಳಂಬವಾಗಿದೆ. ಮುಂದೂಡಲ್ಪಟ್ಟ ಪರೀಕ್ಷೆ ರದ್ದಾಗಲಿವೆ ಎಂದೇ ವಿದ್ಯಾರ್ಥಿನಿಯರು ಭಾವಿಸಿದ್ದರು. ಅದೇ ರೀತಿ ಮುಂದಿನ ಸೆಮಿಸ್ಟರ್ ಆನ್ ಲೈನ್ ತರಗತಿಗೆ ಹಾಜರಾಗಿದ್ದರು. ಇದೀಗ ಭೌತಿಕ ತರಗತಿಗೂ ಹಾಜರಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಹಿಂದಿನ ಸೆಮಿಸ್ಟರ್ ಪರೀಕ್ಷೆಗೂ ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಇದೆಲ್ಲಾ ಹೇಗೆ ಸಾಧ್ಯ? ವಿದ್ಯಾರ್ಥಿನಿಯರಲ್ಲಿ ಒತ್ತಡ ಹೆಚ್ಚುವುದಿಲ್ಲವೇ? ಇದೆಲ್ಲಾ ಸರ್ಕಾರದ ಗಮನಕ್ಕೆ ಇಲ್ಲವಾ? ವಿಶ್ವ ವಿದ್ಯಾಲಯಗಳು ಕೇವಲ ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ವಿದ್ಯಾರ್ಥಿನಿಯರ ಬದುಕಲ್ಲಿ ಚೆಲ್ಲಾಟವಾಡುವುದು ಎಷ್ಟು ಸರಿ? ಎಂದು ವಿದ್ಯಾರ್ಥಿನಿಯರು ಪ್ರಶ್ನಿಸಿದರು. ಅಲ್ಲದೇ ಬೇಡಿಕೆ ಈಡೇರುವವರೆಗೂ ಧರಣಿ ಹಿಂಪಡೆಯಲ್ಲ ಎಂದರು.
ಎಐ ಡಿಎಸ್ ಒ ರಾಜ್ಯ ಕಾರ್ಯದರ್ಶಿ ಅಭಯಾ ದಿವಾಕರ,ಕಾವೇರಿ ರಜಪೂತ, ತೇಜಸ್ವಿನಿ ಎಸ್, ಲಕ್ಷ್ಮಿ ಬಿ, ಅನುಜಾ, ಮೀನಾಕ್ಷಿ, ರಾಜೇಶ್ವರಿ ಕಡಪಟ್ಟಿ ಮತ್ತಿತರರಿದ್ದರು.