ಯುಜಿಡಿ ಸಮಸ್ಯೆ ಶಾಸಕ ಹೆಚ್.ಪಿ.ಸ್ವರೂಪ್ ವಾರ್ಡಿಗಳಿಗೆ ಭೇಟಿ : ಪರಿಶೀಲನೆ

ಯುಜಿಡಿ ಸಮಸ್ಯೆ ಶಾಸಕ ಹೆಚ್.ಪಿ.ಸ್ವರೂಪ್ ವಾರ್ಡಿಗಳಿಗೆ ಭೇಟಿ : ಪರಿಶೀಲನೆ
Published on

ಹಾಸನ: ನಗರದ ಹಲವೆಡೆ ಯುಜಿಡಿ, ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ಹಿನ್ನಲೆಯಲ್ಲಿ ಶಾಸಕ ಹೆಚ್.ಪಿ.ಸ್ವರೂಪ್ ಅವರು ಬುಧವಾರ ಅಧಿಕಾರಿಗಳೊಂದಿಗೆ ಹಲವು ವಾರ್ಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಸಮಸ್ಯೆಗೆ ಶೀಘ್ರವೇ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ನಗರದ 22, 23, 24ನೇ ವಾರ್ಡ್‌ಗಳಲ್ಲಿ ಯಜಿಡಿ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ನಂತರ 17ನೇ ವಾರ್ಡಿನ ಆವರಣದಲ್ಲಿ ಯುಜಿಡಿ ನೀರನ್ನು ಸಂಗ್ರಹಿಸಿ ಅದನ್ನು ಫಿಲ್ಟರ್ ಮಾಡುವ ಕೆಲಸ ಮಾಡಿದರೇ ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ಆಗುತ್ತದೆ ಎನ್ನುವ ಬಗ್ಗೆ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ದೂರು ನೀಡಿದ ಹಿನ್ನಲೆಯಲ್ಲಿ ಆ ಕೆಲಸ ಸ್ಥಗಿತಗೊಳಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದಿನ ಅವಧಿಯ ಯಾವ ಕೆಲಸವನ್ನು ನಿಲ್ಲಿಸುವಂತೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿಲ್ಲ. ಸರಕಾರದ ಆದೇಶದಂತೆ ಹಿಂದಿನ ಮತ್ತು ಹೊಸ ಕಾಮಗರಿಗಳ ಬಿಲ್ ಸ್ಥಗಿತ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಕಾಮಗಾರಿಗಳನ್ನು ಮುಂದುವರೆಸಿಕೊಂಡು ಅಭಿವೃದ್ಧಿ ಕೆಲಸ ಮಾಡುವುದಾಗಿ ಅವರು ತಿಳಿಸಿದರು.

ಯುಜಿಡಿ ಲೈನ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರ ಜೊತೆ ಚರ್ಚಿಸಲಾಗಿದ್ದು, ಸ್ಥಳ ಪರಿಶೀಲಿಸಲಾಗಿದೆ. ತಕ್ಷಣವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತಕ್ಷಣವೇ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ನಗರದಲ್ಲಿ ಯುಜಿಡಿ ಸಮಸ್ಯೆ ಬಹಳಷ್ಟಿದ್ದು, ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಮತ್ತು ಜನರ ಸಮಸ್ಯೆಯನ್ನು ಕೂಡ ಆಲಿಸಿದ್ದೇನೆ. ಶೀಘ್ರದಲ್ಲೇ ಇದಕ್ಕೆ ಮುಕ್ತಿ ನೀಡುವ ಕೆಲಸವನ್ನು ಮಾಡಲಾಗುವುದು ಎಂದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ನಾನು ನನ್ನ ಕುಟುಂಬದವರೊಂದಿಗೆ ಅನ್ಯ ಕಾರ‌್ಯದ ನಿಮಿತ್ತ ತೆರಳಿದ್ದೆವು. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೂ ಕೂಡ ತಿಳಿಸಲಾಗಿತ್ತು. ಯಾವುದೇ ಉದ್ದೇಶಪೂರ್ವಕವಾಗಿ ಗೈರಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಮಂಗಳವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಅವರಿಗೂ ವಾಸ್ತವವನ್ನು ತಿಳಿಸಿದ್ದೇನೆ. ಜೊತೆಗೆ ಜಿಲ್ಲೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ, ಅವರು ಕೂಡ ಸ್ಪಂದಿಸಿದ್ದಾರೆ ಎಂದರು.

ಈ ವೇಳೆ ನಗರಸಭೆ ಆಯುಕ್ತ ಸತೀಶ್ ಕುಮಾರ್, ನಗರಸಭೆ ಸದಸ್ಯರಾದ ವಾಸುದೇವ್, ರಫೀಕ್, ಕ್ರಾಂತಿ ಪ್ರಸಾದ್ ತ್ಯಾಗಿ, ಇರ್ಷಾದ್ ಪಾಷ, ಮಹೇಶ್ ಇತರರು ಇದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net