ಯುಜಿಡಿ ಕೇಬಲ್ ತೆರವಿಗೆ ಆಗ್ರಹ

26kglphoto-1.....
ಕೊಳ್ಳೇಗಾಲ ಪಟ್ಟಣದ ಚಿಕ್ಕರಂಗನಾಥ ಕೆರೆಯೊಳಗೆ ಅಕ್ರಮವಾಗಿ ರಸ್ತೆ ಮಾಡಿರುವ ಬಗ್ಗೆ ರೈತರು ಅಧಿಕಾರಿಗಳನ್ನು ಪ್ರಶ್ನಿಸುತ್ತಾ ತರಾಟೆಗೆ ತೆಗೆದುಕೊಂಡರು, ಮಹದೇವ ಪಾಟೀಲ್, ರಮೇಶ್, ಬಸವರಾಜು, ದಶರಥ್ ಇದ್ದಾರೆ.
Published on

ಕೊಳ್ಳೇಗಾಲ: ಪಟ್ಟಣದ ಚಿಕ್ಕರಂಗನಾಥ ಕೆರೆಯೊಳಗೆ ಅಳವಡಿಸಿರುವ ಕುಡಿಯುವ ನೀರಿನ ಪೈಪ್, ಯುಜಿಡಿ ಚೇಂಬರ್ ಅವೈಜ್ಞಾನಿಕ. ಪೈಪ್‌ಲೈನ್ ಮೇಲ್ಭಾಗದಲ್ಲಿ ನೂರಾರು ಮೀಟರ್ ಮಣ್ಣಿನ ರಸ್ತೆ ಮಾಡಿರುವುದು ಅಕ್ರಮ ಎಂದು ತಾಲೂಕಿನ ಗುಂಡಾಲ್ ಜಲಾಶಯದ ಹಳೇ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.

ಗುಂಡಾಲ್ ಜಲಾಶಯ ವ್ಯಾಪ್ತಿಯ 9 ಕೆರೆಗಳ ಒತ್ತುವರಿ ತೆರವು ಮಾಡಬೇಕು. ಚಿಕ್ಕರಂಗನಾಥ ಕೆರೆಯೊಳಗೆ ಅಳವಡಿಸಿರುವ ಯುಜಿಡಿ ಚೇಂಬರ್ ತೆರವುಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಗುಂಡಾಲ್ ಜಲಾಶಯದ ಹಳೇ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘ 8 ದಿನಗಳಿಂದ ಕಬಿನಿ ಇಲಾಖೆ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

6-7 ದಿನಗಳಿಂದ ಚಿಕ್ಕರಂಗನಾಥ ಕೆರೆ ಒತ್ತುವರಿ ತೆರವು ಹಾಗೂ ಕೆರೆ ಬೌಂಡರಿ ಮಾರ್ಕ್ ಮಾಡಲು ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಎರಡು ಜೆಸಿಬಿ ಮೂಲಕ ಗಿಡ-ಗಂಟಿ ತೆರವುಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಸಮ್ಮುಖದಲ್ಲಿ ಅಧಿಕಾರಿಗಳು ಚಿಕ್ಕರಂಗನಾಥ ಕೆರೆಗೆ ಭೇಟಿ ನೀಡಿದಾಗ, ಲಯನ್ಸ್ ವಿದ್ಯಾ ಸಂಸ್ಥೆ ಹಿಂಭಾಗ ಕೆರೆಯೊಳಗೆ ಅಕ್ರಮವಾಗಿ 4 ಮೀಟರ್ ರಸ್ತೆ ಯಾರು ಮಾಡಿದ್ದು, ಇದಕ್ಕೆ ಅವಕಾಶ ನೀಡಿದ್ದು ಯಾರೆಂದು ಸಂಘದ ಅದ್ಯಕ್ಷ ದಶರಥ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಕಬಿನಿ ಇಇ ಮಹದೇವ ಪಾಟೀಲ್, ಎಇಇ ರಮೇಶ್ ತಡಬಡಾಯಿಸಿದರು.

ರೈತ ಮುಖಂಡ ಅಣಗಳ್ಳಿ ಬಸವರಾಜು ಮಾತನಾಡಿ, ಈಗಾಗಲೇ ಕೆರೆಯೊಳಗೆ ಹೂಳು ತುಂಬಿದೆ. ಮೊದಲಿಗೆ ಕೆರೆ ಅಭಿವೃದ್ಧಿ ಆಗಬೇಕಾದರೆ ಹೂಳು ತೆಗೆದು ನೀರು ಶೇಖರಣೆಗೆ ಅವಕಾಶ ಮಾಡಿ, ಇದರಿಂದ ಕೆರೆ ಸಂಪೂರ್ಣವಾಗಿ ತುಂಬುತ್ತದೆ. ಅಕ್ರಮವಾಗಿ ಒತ್ತುವರಿ ಆಗುವುದಕ್ಕೆ ಅವಕಾಶವಿರುವುದಿಲ್ಲ ಎಂದು ಸಲಹೆ ನೀಡಿದರು.

ರಸ್ತೆ ಮಾಡಿದವರ ಮೇಲೆ ಕ್ರಮ: ಕೆರೆಯೊಳಗೆ ಅಕ್ರಮವಾಗಿ ರಸ್ತೆ ಏರಿ ಮಾಡಿದವರು ಯಾರು ಅಂತ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಿಸುತ್ತೇನೆ. ಸದ್ಯಕ್ಕೆ ಕೆರೆ ಸುತ್ತಲೂ ಫೆನ್ಸ್ ಅಳವಡಿಸಿ, ಏರಿ ನಿರ್ಮಿಸುತ್ತೇವೆ ಎಂದು ಇಇ ಮಹದೇವ ಪಾಟೀಲ್ ರೈತರಿಗೆ ಭರವಸೆ ನೀಡಿದರು.

ಹೈಡ್ರಾಮಾ: ಅಧಿಕಾರಿಗಳ ಭೇಟಿ ವೇಳೆ ಕೆರೆ ಜಾಗದಲ್ಲಿ ಅಕ್ರಮವಾಗಿ ಕೃಷಿ ಮಾಡುತ್ತಿದ್ದ ಟಿ.ಸಿ. ಹುಂಡಿಯ ಮಾದೇಶ್, ಹೊಟ್ಟೆಪಾಡಿಗಾಗಿ ನಾನು ಹಲವು ವರ್ಷದಿಂದ ಫಸಲು ಬೆಳೆಯುತ್ತಿದ್ದೇನೆ. ಏಕಾಏಕಿ ತೆರವು ಮಾಡಿ ಎಂದರೆ ಹೇಗೆ, ಹಿಂದೆಯಲ್ಲ ಚಕಾರ ಎತ್ತದೆ ಈಗ ಬಂದಿದ್ದೀರಾ, ನನಗೆ ಜೀವನಾಂಶಕೊಟ್ಟರೆ ಜಾಗ ಬಿಡುತ್ತೇನೆ, ಇಲ್ಲ ನನಗೆ ವಿಷ ಕೊಡಿ ಕುಡಿದು ಸಾಯುತ್ತೇನೆ ಎಂದು ಕೆಲಕಾಲ ಹೈಡ್ರಾಮಾ ನಡೆಸಿದರು.

ಕಬಿನಿ ಎಇಇ ರಮೇಶ್, ರಾಮಕೃಷ್ಣ, ಸಹಾಯಕ ಇಂಜಿನಿಯರ್ ಪುಣ್ಯಶ್ರೀ, ಸತೀಶ್, ಕುಮಾರ, ಭೂಮಾಪನ ಸಿಬ್ಬಂದಿ ರಾಮಾಂಜನೇಯ, ನವೀನ್, ಪಿಎಸ್‌ಐ ಮಹೇಶ್ ಕುಮಾರ್, ತಾಲೂಕಿನ ಗುಂಡಾಲ್ ಜಲಾಶಯದ ಹಳೇ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ಅಧ್ಯಕ್ಷ ದಶರಥ್, ರೈತ ಮುಖಂಡ ಅಣಗಳ್ಳಿ ಬಸವರಾಜು, ರಾಮಕೃಷ್ಣ, ನರಸಿಂಹನ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net