ಯುಕೆಪಿ ಯೋಜನೆ ಅನುಷ್ಠಾನಗೊಳಿಸಿ

bkt-25-4
ಯುಕೆಪಿ ಯೋಜನೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಮುಳಗಡೆ ಹಿತ ರಕ್ಷಣಾ ಸಮಿತಿ, ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ, ಭಾರತೀಯ ಕಿಸಾನ ಸಂಘ, ಬಾಗಲಕೋಟೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದರು.
Published on

ಬಾಗಲಕೋಟೆ: ಯುಕೆಪಿ ಯೋಜನೆ ಪೂರ್ಣಗೊಳಿಸುವುದು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಮುಳಗಡೆ ಹಿತ ರಕ್ಷಣಾ ಸಮಿತಿ, ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ, ಭಾರತೀಯ ಕಿಸಾನ ಸಂಘ, ಬಾಗಲಕೋಟೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಮಳೆ ನಡುವೆ ಸಂತ್ರಸ್ತರು, ಹೋರಾಟ ಸಮಿತಿ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

೨೦೫೦ ಇಸ್ತಿಗೆ ೧೩೦ ಟಿ.ಎಂಸಿ ರಾಜ್ಯದ ಪಾಲಿನ ನೀರಿನ ಮೇಲೆ ಇರುವ ರಾಜ್ಯದ ಹಕ್ಕು ಸಮಾಪ್ತಿಯಾಗುವದರಿಂದ ಯುಕೆಪಿ ಯೋಜನೆಗಳಿಗೆ ಆದ್ಯತೆ ನೀಡಿ ೧೩೦ ಟಿಎಂಸಿ ನೀರಿನ ಬಳಕೆ ಮಾಡಿ ಪ್ರಾದೇಶಿಕ ಅಸಮತೋಲನ ಹೋಗಲಾಡಿಸಬೇಕು. ವಾಗ್ದಾನದಂತೆ ಐದು ವರ್ಷದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ೭೮ ಸಾವಿರ ಕೋಟಿ ರೂ. ಅಗತ್ಯವಿದ್ದು, ಪ್ರಸಕ್ತ ವರ್ಷ ೧೫೬೦೦ ಕೋಟಿ ರೂ. ಒದಗಿಸಬೇಕು, ೫೨೪.೨೫೬ ಹಿನ್ನೀರಿಗೆ ಮುಳಗಡೆಯಾಗುವ ಜಮೀನುಗಳಿಗೆ ಏಕಾಕಾಲಕ್ಕೆ ಪರಿಹಾರ ಒದಗಿಸಬೇಕು. ಒಂದು ಯೋಜನೆಗೆ ಒಂದೇ ಭೂ ದರ ಮತ್ತು ಒಂದೇ ಮಾರ್ಗಸೂಚಿ ದರ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.

ಪುನರ್ ವಸತಿ ಕೇಂದ್ರಗಳನ್ನು ನಗರ ಯೋಜನಾ ನಿಯಮದಂತೆ ಅಭಿವೃದ್ಧಿ ಪಡಿಸಲು ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು, ಬಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರದಿಂದ ಪಡೆದಿರುವ ಕಾರ್ಪಸ ಫಂಡ್ ವಾಪಸ್ಸ ಪಡೆದುಕೊಳ್ಳಬೇಕು, ಸಂತ್ರಸ್ತರಿಗಾಗಿ ವಸತಿ ಶಾಲೆಗಳನ್ನು ಆರಂಭಿಸಬೇಕು, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಕಚೇರಿ ಆಲಮಟ್ಟಿಗೆ ಸ್ಥಳಾಂತರಿಸಬೇಕು, ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಮುಖಂಡರಾದ ಮಾಜಿ ಸಚಿವ ಅಜಯ ಕುಮಾರ ಸರನಾಯಕ,ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಸಂಚಾಲಕ ಪ್ರಕಾಶ ಅಂತರಗೊಂಡ, ಮುಳುಗಡೆ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಅದೃಶ್ಯಪ್ಪಾ ದೇಸಾಯಿ, ವಿರುಪಾಕ್ಷಯ್ಯ ಹಿರೇಮಠ, ಎಸ್.ಟಿ.ಪಾಟೀಲ, ಸಿದ್ದು ಗಿರಗಾವಿ, ಟಿ.ವೈ.ಜಾನಮಟ್ಟಿ, ಈಶ್ವರ ಕಾಡಪ್ಪನವರ, ವೆಂಕಣ್ಣ ಗಿಡ್ಡಪ್ಪನವರ, ಜಿ.ಡಿ. ದೇಸಾಯಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net