ಯುಕೆಜಿ ಮಗು ಅನುತ್ತೀರ್ಣ!: ಶಾಲೆ ಆಡಳಿತ ಮಂಡಳಿ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ

new01
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಎಸ್ಸೆಸ್ಸಲ್ಸಿ ಪರೀಕ್ಷೆ, ದ್ವಿತೀಯ ಪಿಯು ಪರೀಕ್ಷೆ ಅಥವಾ ಹೈಸ್ಕೂಲ್ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣ ಆಗಿರುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಯುಕೆಜಿ ವಿದ್ಯಾರ್ಥಿ ಅನುತ್ತೀರ್ಣ ಆಗಿರುವುದನ್ನು ನೋಡಿದ್ದೀರಾ…ಇಲ್ಲಿವರೆಗೂ ಇಂತಹ ಪ್ರಕರಣ ವರದಿಯಾಗಿರುವ ಮಾಹಿತಿ ಇಲ್ಲ. ಆದರೆ, ಈಗ ಖಾಸಗಿ ಶಾಲೆಯೊಂದು ಯುಕೆಜಿ ಓದುತ್ತಿರುವ ಎಳೆಯ ಬಾಲಕಿಯನ್ನು ಅನುತ್ತೀರ್ಣ ಮಾಡಿರುವ ಅಪರೂಪದ ಪ್ರಕರಣ ವರದಿಯಾಗಿದೆ. ೇಲ್ ಮಾಡಿದ ಕ್ರಮಕ್ಕೆ ಪಾಲಕರು ಹಾಗೂ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ಶಿಕ್ಷಣ ಹಕ್ಕು ಕಾಯ್ದೆಯ(ಆರ್‌ಟಿಇ) ಪ್ರಕಾರ ರಾಜ್ಯದಲ್ಲಿ 8ನೇ ತರಗತಿವರೆಗೆ ಯಾವುದೇ ವಿದ್ಯಾರ್ಥಿಯನ್ನು ೇಲ್ ಮಾಡುವಂತಿಲ್ಲ. ಒಂದು ವೇಳೆ ಅನುತ್ತೀರ್ಣ ಮಾಡಿದರೆ, ಆರ್‌ಟಿಇ ನಿಯಮ ಉಲ್ಲಂಘನೆಯಾಗಲಿದೆ. ಆದರೆ, ಆನೇಕಲ್ ತಾಲೂಕಿನ ದೀಪಹಳ್ಳಿಯ ಸೇಂಟ್ ಜೋಸ್ೆ ಚಾಮಿನೇಡ್ ಅಕಾಡೆಮಿ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿನಿಯನ್ನು ಅನುತ್ತೀರ್ಣ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ವಿದ್ಯಾರ್ಥಿನಿ ತಂದೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ‘‘ಈ ಎಳೆಯ ಮಗುವನ್ನು ಅನುತ್ತೀರ್ಣ ಮಾಡಿರುವ ಶಿಕ್ಷಣ ಸಂಸ್ಥೆಗೆ ತಲೆಯೂ ಇಲ್ಲ. ಹೃದಯ ಮೊದಲೇ ಇಲ್ಲ. ಆ ಮಗುವನ್ನು ಏನು ಮಾಡಲು ಹೊರಟಿದೆ ಈ ಮಹಾ ಶಿಕ್ಷಣ ಸಂಸ್ಥೆ?’ ಎಂದು ಪ್ರಶ್ನಿಸಿದ್ದಾರೆ.
ೇಲ್ ಹೇಗೆ?: ವಿದ್ಯಾರ್ಥಿನಿಯು ನಾಲ್ಕು ವಿಷಯಗಳಲ್ಲಿ ಪರೀಕ್ಷೆ ಬರೆದಿದ್ದಾಳೆ. 160 ಅಂಕಗಳಿಗೆ 100 ಅಂಕಗಳನ್ನು ಪಡೆದಿದ್ದಾಳೆ. ಇಂಗ್ಲಿಷ್, ಗಣಿತ, ಪರಿಸರ ವಿಜ್ಞಾನ ವಿಷಯದಲ್ಲಿ ಉತ್ತೀರ್ಣಳಾಗಿದ್ದು,
ರೈಮ್ಸ್‌ನಲ್ಲಿ ಮಾತ್ರ ಅನುತ್ತೀರ್ಣ ಆಗಿದ್ದಾಳೆ. ಇದರಿಂದ ಶಾಲಾ ಅಡಳಿತ ಮಂಡಳಿಯು ಅನುತ್ತೀರ್ಣ ಎಂದು ನಮೂದಿಸಿದೆ.

ಪ್ರಮಾದ ಸರಿಪಡಿಸಿ: ನನ್ನ ಮಗಳು ಅನುತ್ತೀರ್ಣ ಆಗಿರುವುದನ್ನು ಶಾಲಾ ಆಡಳಿತ ಮಂಡಳಿಯ ಬಳಿ ಪ್ರಶ್ನಿಸಿದ್ದೇನೆ. ಯಾರೂ ಈ ಬಗ್ಗೆ ದೂರು ನೀಡದೆ ನೀವೊಬ್ಬರು ದೂರು ನೀಡಿದರೆ, ಏನೂ ಮಾಡಲು ಸಾಧ್ಯವಿಲ್ಲವೆಂದು ಉಡಾೆ ಉತ್ತರ ನೀಡಿದ್ದಾರೆ. ನನ್ನ ಮಗಳು ಈಗಾಗಲೇ ಮಾನಸಿಕವಾಗಿ ನೊಂದಿದ್ದಾಳೆ. ಇದು ಸರ್ಕಾರದ ನಿಯಮ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ. ಪ್ರಮಾದ ಸರಿಪಡಿಸದೇ ಇದ್ದಲ್ಲಿ, ಐಸಿಎಸ್‌ಇಗೂ ಪತ್ರ ಬರೆಯುವುದಾಗಿ ವಿದ್ಯಾರ್ಥಿನಿ ತಂದೆ ಮನೋಜ್ ಬಾದಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಶಿಕ್ಷಣ ಇಲಾಖೆಯಿಂದ ನೋಟಿಸ್ ಜಾರಿ: ಯುಕೆಜಿ ಮಗುವನ್ನು ಅನುತ್ತೀರ್ಣ ಮಾಡಿದ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದ್ದು, ಇಲಾಖೆಯು ಮುಜುಗರಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನೋಟಿಸ್‌ಗೆ ತಕ್ಷಣವೇ ವಿವರಣೆ ನೀಡಬೇಕು. ಇಲ್ಲವಾದರೆ, ನೀಡಲಾಗಿರುವ ಅನುಮತಿ ರದ್ದುಪಡಿಸಲಾಗುವುದು ಎಂಬ ಎಚ್ಚರಿಕೆ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮೀ ಅವರು ಕಾರಣ ಕೇಳಿ ಶಾಲೆಗೆ ನೋಟಿಸ್ ಜಾರಿ ಮಾಡಿದ್ದಾರೆ.

ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಆ್ಯಪ್ ಮೂಲಕ ಆಗಿರುವ ಪ್ರಮಾದ ಎಂದು ತಿಳಿದು ಬಂದಿದೆ. ಸುರಕ್ಷತೆ ಹಾಗೂ ಮಗುವಿನ ಭವಿಷ್ಯದ ದೃಷ್ಟಿಯಿಂದ ಸಮರ್ಪಕವಲ್ಲದ ಆ್ಯಪ್‌ಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ.
ದತ್ತ ಗುರು ಶಿಕ್ಷಣ ಸಂಯೋಜಕ, ಆನೇಕಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net