

ಹಾಸನ: ಮಾನವ ಸಂಪನ್ಮೂಲ ರಾಷ್ಟ್ರೀಯ ಆಸ್ತಿಯಾಗಿಬೇಕು. ಈ ನಿಟ್ಟಿನಲ್ಲಿ ಯಾವುದೇ ಮಗುವೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಿ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಪ್ರಾಥಮಿಕ ಹಂತದಿಂದಲೇ ಮಕ್ಕಳು ಶೈಕ್ಷಣಿಕ ಚಟುವಟಿಕೆಗೆ ಆದ್ಯತೆ ನೀಡಬೇಕು. ಆಗ ಮಾತ್ರ ಮುಂದಿನ ತರಗತಿಗಳಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಒಂದನೇ ತರಗತಿಯಿಂದ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದರೆ 10ನೇ ತರಗತಿಯ ಫಲಿತಾಂಶ ಸುಧಾರಣೆ ಆಗುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳು ಪುನಃ ಪರೀಕ್ಷೆಗೆ ಹಾಜರಾಗಿದ್ದಾರಾ ಎಂಬುದರ ಬಗ್ಗೆ ಗಮನಹರಿಸಿ ಪರಿಶೀಲನೆ ಮಾಡಿ. ಎಷ್ಟು ಮಕ್ಕಳು ಪರೀಕ್ಷೆಗೆ ಹಾಜರಾಗಿಲ್ಲವೋ ಅಂತಹ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು. ಮಕ್ಕಳ ಶೈಕ್ಷಣಿಕ ಕಲಿಕೆಗೆ ಏನು ತೊಂದರೆ ಇದೆ ಎಂಬುದನ್ನು ಮನಗಾಣಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಪತ್ತೆ ಹಚ್ಚಿ. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಶೇ.43.76ರಷ್ಟು ಮುಸ್ಲಿಂ ಸಮುದಾಯದವರು ಅನಕ್ಷರಸ್ಥರಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಸಮಿತಿ ನೂತನ ಸದಸ್ಯರು ಅಧಿಕಾರಿಗಳೊಂದಿಗೆ ಕೈ ಜೋಡಿಸಿ ಶಾಲೆಯಿಂದ ಹೊರಗುಳಿದ ಮಕ್ಕಳ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಲು ತಿಳಿವಳಿಕೆ ನೀಡಿ. ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ. ಜಿಲ್ಲೆಯಲ್ಲಿರುವ ಒಟ್ಟು 2691 ಅಂಗನವಾಡಿ ಕೇಂದ್ರಗಳಲ್ಲಿ ನಗರ ಪ್ರದೇಶಗಳಲ್ಲಿರುವ 136 ಅಲ್ಪಸಂಖ್ಯಾತರ ಅಂಗನವಾಡಿ ಕೇಂದ್ರಗಳ ನಕ್ಷೆಯೊಂದಿಗೆ ಮಾಹಿತಿ ನೀಡಿ. ನಗರ ಪ್ರದೇಶಗಳಲ್ಲಿ ಸ್ವಂತ ಅಥವಾ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಗ್ಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ಪಟ್ಟಿ ಮಾಡಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಮೊದಲ ಬಾರಿಗೆ 10 ಸಾವಿರ ರೂ. ನೀಡಲಾಗುತ್ತದೆ. ಅದನ್ನು ತಿರುವಳಿ ಮಾಡಿದ ನಂತರ 20 ಸಾವಿರ ರೂ. ನೀಡಲಾಗುತ್ತದೆ. ಅದನ್ನು ತಿರುವಳಿ ಮಾಡಿದರೆ 50 ಸಾವಿರ ರೂ. ಸಾಲ ಸೌಲಭ್ಯ ದೊರೆಯುತ್ತದೆ. ಇದನ್ನು ಬಳಸಿಕೊಂಡು ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನಿಷ್ಠ 90 ದಿನ ಕೆಲಸ ಮಾಡಿದರೆ ಕಾರ್ಮಿಕ ಇಲಾಖೆಯಿಂದ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಕಾರ್ಮಿಕರಿಗೆ ವಿವಿಧ ರೀತಿಯ ಸೌಲಭ್ಯಗಳು ದೊರೆಯಲಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಲ್ಪ ಸಂಖ್ಯಾತರ ಮಾಹಿತಿ ಕೇಂದ್ರದ ಮೂಲಕ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವವರಿಗೆ ಯಶಸ್ವಿನಿ ಯೋಜನೆಯಡಿ ಆರೋಗ್ಯ ಸೌಲಭ್ಯಗಳು ದೊರೆಯುತ್ತದೆ ಇದರ ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ಉರ್ದು ಶಾಲೆಗಳಲ್ಲಿರುವ ಶಿಕ್ಷಕರ ಕೌಶಲ ಅಭಿವೃದ್ಧಿಗಾಗಿ ಡಯಟ್‌ನಲ್ಲಿ ತರಬೇತಿ ನೀಡಲು ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದರು.
ಆಯೋಗದ ಕಾರ್ಯದರ್ಶಿ ಮಾಜುದ್ದೀನ್ ಖಾನ್ ಮಾತನಾಡಿ, ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಣೆ ಮಾಡುವುದು ಆಯೋಗದ ಮುಖ್ಯ ಉದ್ದೇಶ. ಭಾರತ ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಯಲ್ಲಿದೆ. ಇದನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಪರಿವರ್ತನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ಜನರ ಬಳಿಗೆ ಹೋಗಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಮುತುವರ್ಜಿ ವಹಿಸಿಬೇಕಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆಯೋಗದ ಸದಸ್ಯ ಅಬ್ದುಲ್ ಖಾದೀರ್, ಆಪ್ತ ಕಾರ್ಯದರ್ಶಿ ಮುಜಿಬುಲ್ಲಾ ಜಫಾರಿ, ಜಿಲ್ಲಾ ಮಟ್ಟದ ಸಮಿತಿಯ ಸದಸ್ಯರಾದ ಮೊಹಮ್ಮದ್ ಜಾಫರ್, ರೇಮಂಡ್, ಎನ್. ನಾಗಸೇನ್, ಯಶೋಧಾ, ಜಮೀಲ್ ಅಹಮದ್ ಷರೀಫ್, ಮೊಹಮ್ಮದ್ ಗೌಸ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.