ಯಾವುದೇ ಜಾತಿ, ಧರ್ಮಕ್ಕೆ ಕಾಂಗ್ರೆಸ್ ಪಕ್ಷ ಸೀಮಿತವಾಗಿಲ್ಲ

22 vtp1 Congress (1)
Published on

ವಿರಾಜಪೇಟೆ: ಕಾಂಗ್ರೆಸ್ ಪಕ್ಷ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಕಾರ್ಯದರ್ಶಿ ರೋಜಿಜಾನ್ ಹೇಳಿದರು.


ಪಟ್ಟಣದ ಸೆರೆನಿಟಿ ಸಭಾಂಗಣದಲ್ಲಿ ಬುಧವಾರ ಕಾಂಗ್ರೆಸ್ ಆಯೋಜಿಸಿದ್ದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದು ತಿಳಿಸಿದರು.


ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದರಿಂದ ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಿದೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಶೇ.40 ಕಮಿಷನ್ ಗಳಿಕೆಯಿಂದ ಕರ್ನಾಟಕ ರಾಷ್ಟ್ರದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ವಿಧಾನಸಭಾ ಅಧಿವೇಶನ ಮುಗಿದ ಬಳಿಕ ಬಿಜೆಪಿಯ ಕೆಲ ಸಚಿವರು ಹಾಗೂ ಶಾಸಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ಜಿಲ್ಲೆಯಲ್ಲಿ 20 ವರ್ಷದಿಂದ ಬಿಜೆಪಿ ಶಾಸಕರಿದ್ದರೂ ಅಭಿವೃದ್ಧಿ ಶೂನ್ಯವಾಗಿದೆ ಎಂದರು.


ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಟಿಪ್ಪು ಮತ್ತು ಸಾವರ್ಕರ್ ಹೆಸರಿನಲ್ಲಿ ಚುನಾವಣೆ ಎಂದು ಬಿಜೆಪಿ ನಾಯಕರು ಬಿಂಬಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಮುಂಗಡ ಪತ್ರದಲ್ಲಿ ರೈತರು, ಕೃಷಿಕರು, ಬಡವರು, ಮಧ್ಯಮ ವರ್ಗದವರ ಬಗ್ಗೆ ಕಾಳಜಿ ತೋರಿಸಲಿಲ್ಲ. ರಾಜ್ಯ ಮುಂಗಡ ಪತ್ರ ಶೂನ್ಯವಾಗಿದ್ದು ಅವರ ಪಕ್ಷದ ಒಳಗೇ ಮುಖ್ಯಮಂತ್ರಿಗಳು ಟೀಕೆಗೆ ಒಳಗಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಅವೈಜ್ಞಾನಿಕವಾಗಿದ್ದು ಸರ್ಕಾರ ಇದೆಯೋ ಅಥವಾ ಇಲ್ಲವೋ ಎಂಬಂತಾಗಿದೆ ಎಂದು ಹೇಳಿದರು.


ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ಬಿಜೆಪಿ ಸರ್ಕಾರ 2ನೇ ಬಾರಿ ಅಧಿಕಾರಕ್ಕೆ ಬಂದು ಬೊಕ್ಕಸ ಖಾಲಿ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿ ಹೊರಬರಲು ಸಾಧ್ಯವಾಗುತ್ತಿಲ್ಲ. ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತಾಡುವ ಯಾವುದೇ ನೈತಿಕತೆ ಇಲ್ಲ ಎಂದು ತಿಳಿಸಿದರು.


ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ಬೋಯಿಕೇರಿಯ ಅಜಯ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.


ಮಾಜಿ ಸಚಿವ ಬಿ.ಎ.ಜೀವಿಜಯ, ಮಾಜಿ ಶಾಸಕರಾದ ಶಾಂತೇಯಂಡ ವೀಣಾ ಅಚ್ಚಯ್ಯ, ಚೆಪ್ಪುಡಿರ ಅರುಣ್ ಮಾಚಯ್ಯ, ಕೆ.ಎಂ. ಇಬ್ರಾಹಿಂ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಎ.ಪೊನ್ನಣ್ಣ, ಕೆ.ಪಿ ಚಂದ್ರಕಲಾ, ಡಾ.ಮಂಥರ್‌ಗೌಡ, ಟಿ.ಪಿ.ರಮೇಶ್, ರಂಜಿ ಪೂಣಚ್ಚ, ಮಾದಂಡ ತಿಮ್ಮಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net