ಯಾವುದೇ ಕಾರಣಕ್ಕೂ ಡಿಸಿಎಂ ಸ್ಥಾನ ಅಪೇಕ್ಷಿಸಲ್ಲ: ಸಚಿವ ಈಶ್ವರಪ್ಪ ಸ್ಪಷ್ಟನೆ

Screenshot_2020-01-03-20-42-24-1233242057.png
Published on

ಶಿವಮೊಗ್ಗ: ಯಾವುದೇ ಕಾರಣಕ್ಕೂ ಡಿಸಿಎಂ ಆಗುವುದಿಲ್ಲ. ಈಗಾಗಲೇ ಅನೇಕರು ಡಿಸಿಎಂ ಸ್ಥಾನಕ್ಕೆ ಅಪೇಕ್ಷೆ ಪಟ್ಟಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ನಾನೂ ಡಿಸಿಎಂ ಸ್ಥಾನ ಅಪೇಕ್ಷಿಸುವುದು ತಪ್ಪಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಸ್ಥಾನದ ಬಗ್ಗೆ ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ಈ ವಿಚಾರದಲ್ಲಿ ಕೇಂದ್ರದ ನಾಯಕರು ಮತ್ತು ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದರು.

ಕೇಂದ್ರದ ನೆರೆ ಪರಿಹಾರದಿಂದ ಎರಡು ಹಂತದಲ್ಲಿ ಕ್ರಮವಾಗಿ 1,500 ಹಾಗೂ 1,879 ಕೋಟಿ ರೂ. ಬಿಡುಗಡೆ ಆಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರ ನೆರೆ ಬಂದಿಲ್ಲ. 11 ರಾಜ್ಯಗಳಲ್ಲಿದೆ. ಹಾಗಾಗಿ ಕೇಂದ್ರ ಹಂತ ಹಂತವಾಗಿ ಪರಿಹಾರ ಬಿಡುಗಡೆ ಮಾಡುತ್ತಿದೆ. ಪ್ರತಿಪಕ್ಷಗಳ ತೃಪ್ತಿಪಡಿಸಲು ಪರಿಹಾರ ಬಿಡುಗಡೆ ಮಾಡುತ್ತಿಲ್ಲ ಎಂದರು.

ಕುಮಾರಸ್ವಾಮಿಗೆ ಭ್ರಮೆ: ಬಿಜೆಪಿ ಶಾಸಕರು ಜೆಡಿಎಸ್ ಸಂಪರ್ಕದಲ್ಲಿದ್ದಾರೆಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ಮೊದಲು ಜೆಡಿಎಸ್‌ನ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ಸವಾಲು ಹಾಕಿದರು. ಬಿಜೆಪಿ ಶಾಸಕರು ಹುಲಿಗಳಿದ್ದಂತೆ. ಅವರನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ. ಬಿಜೆಪಿಗೆ ಈಗಿರುವ ಶಾಸಕರು ಹೆಚ್ಚಳವಾಗಿದೆ. ಬಿಜೆಪಿ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುತ್ತೇವೆ ಎಂಬುದು ಕುಮಾರಸ್ವಾಮಿ ಅವರ ಭ್ರಮೆ ಎಂದರು.

ಕುತಂತ್ರದಿಂದ ಸಿಎಎ ಗೊಂದಲ:ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚೆ ಆಗಬೇಕಿದೆ. ವೈಯಕ್ತಿಕವಾಗಿ ತೊಟೆ ತಟ್ಟುವುದನ್ನು ನಾನು ಒಪ್ಪುವುದಿಲ್ಲ. ಪಾಕಿಸ್ತಾನದಲ್ಲಿ ಹಿಂದೂ, ಕ್ರೈಸ್ತ ಹಾಗೂ ಬೌದ್ಧರು ಸಂಕಷ್ಟಗಳನ್ನು ಹೆದರಿಸುತ್ತಿದ್ದಾರೆ. ಆದರೆ ಆ ಪರಿಸ್ಥಿತಿ ಮುಸ್ಲಿಮರಿಗೆ ಭಾರತದಲ್ಲಿಲ್ಲ. ಕಾಯ್ದೆಯಿಂದ ಒಬ್ಬ ಭಾರತೀಯ ಮುಸ್ಲಿಮರಿಗೆ ಅನ್ಯಾಯವಾಗಲ್ಲ. ಆದರೂ ಕಾಂಗ್ರೆಸ್ ಸೇರಿ ವಿರೋಧಿಗಳು ಸಿಎಎ ಹೆಸರಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಯ್ದೆಯನ್ನು ತಿಳಿಯದೇ ಕೆಲವರು ಕುತಂತ್ರದಿಂದ ಪ್ರಚೋಧನೆ ನಿಡುತ್ತಿದ್ದಾರೆ. ಬಿಜೆಪಿ ವಿರೋಧಿಗಳ ದುಷ್ಕೃತ್ಯ ಬಹಳ ದಿನ ನಡೆಯುವುದಿಲ್ಲ. ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಶ್ರೀಗಂಧ ಸಂಸ್ಥೆಯಿಂದ ಶಿವಮೊಗ್ಗದಲ್ಲಿ ಜ.25ರಂದು ವಿಚಾರಗೋಷ್ಠಿ ಆಯೋಜಿಸಿದ್ದು, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಮೂರ್ತಿಯನ್ನು ಕರೆಸುವ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net