ಯಾವುದಕ್ಕೂ ಹೆದರಲ್ಲ, ಏನು ಬೇಕಾದರೂ ತನಿಖೆ ಮಾಡಿ: ಡಿ.ಕೆ.ಶಿವಕುಮಾರ್

D.K.Shivakumar 01
Published on

ಮೈಸೂರು: ನನ್ನ ಅವಧಿಯ ದಾಖಲೆ ತರುವಂತೆ ಇಂಧನ ಇಲಾಖೆ ಅಧಿಕಾರಿಗಳಿಗೆ ಹೆದರಿಸಲಾಗುತ್ತಿದೆ ಎಂದು ಮಾಜಿ ಇಂಧನ ಸಚಿವರೂ ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

ಈ ಬಗ್ಗೆ ಕೆಲ ಅಧಿಕಾರಿಗಳು ನನಗೆ ಕರೆ ಮಾಡಿದ್ದರು. ನನ್ನ ಅವಧಿಯ ದಾಖಲೆ ಕೊಡುವಂತೆ ಒತ್ತಡ ಹಾಕಲಾಗುತ್ತಿದೆ. ನಾನು ಎಲ್ಲ ದಾಖಲೆಗಳನ್ನು ಕೊಡಿ ಎಂದು ಹೇಳಿದ್ದೇನೆ. ತಪ್ಪು ಮಾಡಿದ್ದರೆ ನಾವೇ ಹಗ್ಗ ಸಹ ಕಳುಹಿಸಿಕೊಡುತ್ತೇವೆ. ಕಾಂಗ್ರೆಸ್ ಮತ್ತು ನನ್ನನ್ನು ಹೆದರಿಸಲು ಬಿಜೆಪಿ ಮುಂದಾಗಿದೆ. ನಾನು ಯಾವುದಕ್ಕೂ ಹೆದರುವವನಲ್ಲ. ಏನು ಬೇಕಾದರೂ ತನಿಖೆ ಮಾಡಿಕೊಳ್ಳಲಿ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ನಡೆಸಲಾಗುವುದು’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿ, ಚಡ್ಡಿ, ಪ್ಯಾಂಟು, ಹಾಸಿಗೆ, ಮೊಟ್ಟೆ ಖರೀದಿ ಸೇರಿದಂತೆ ವಿವಿಧ ವಿಷಯಗಳ ಕುರಿತು ತನಿಖೆ ಮಾಡಲಿ. ನಾನು ಎಲ್ಲದಕ್ಕೂ ಸಿದ್ಧ. ಆದರೆ, ತನಿಖೆ ಆರಂಭಿಸಲು ಮೂರು ವರ್ಷ ಬೇಕಿತ್ತಾ ಎಂದು ವ್ಯಂಗ್ಯವಾಡಿದರು.

ಮತಾಂತರ ನಿಷೇಧ ಕಾಯ್ದೆ ಮಂಡನೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಎಲ್ಲಿ ಮತಾಂತರ ನಡೆಯುತ್ತಿದೆ? ಪ್ರಚಾರಕ್ಕಾಗಿ ಕರ್ನಾಟಕ ಧಾರ್ಮಿಕ ಸ್ವಾತಂತ್ರೃ ಹಕ್ಕು ಸಂರಕ್ಷಣಾ ಮಸೂದೆಯನ್ನು ಬಿಜೆಪಿ ಮಂಡನೆ ಮಾಡುತ್ತಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಪಸಂಖ್ಯಾತರಿಗೆ ಭಯ ಹುಟ್ಟಿಸಲು ಕಾಯ್ದೆ ತರಲಾಗುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆಯೇ ಕಾಯ್ದೆ ಇತ್ತು. ಭಾವನಾತ್ಮಕ ವಿಚಾರವನ್ನು ಕೆರಳಿಸಲು ಈ ಮಸೂದೆ ಮಂಡನೆ ಮಾಡುತ್ತಿದ್ದು, ಸಮಾಜವನ್ನು ವಿಭಜನೆ ಮಾಡಲು ಬಿಜೆಪಿ ಕೈಹಾಕಿದೆ. ಜಾತಿ, ಧರ್ಮವನ್ನು ಒಡೆಯುವ ಹುನ್ನಾರ ನಡೆಸಿದೆ. ಹಿಂದು ಧರ್ಮದ ಓಲೈಕೆ ಹಾಗೂ ಪಕ್ಷದ ವರಿಷ್ಠರನ್ನು ಮೆಚ್ಚಿಸಲು ಹೀಗೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net