ಯಾವ ಪುರುಷಾರ್ಥಕ್ಕಾಗಿ ಜನಸಂಕಲ್ಪ ಸಮಾವೇಶ?: ಕೆಪಿಸಿಸಿ ವಕ್ತಾರ ವೆಂಕಟೇಶ್ ಕಿಡಿ

f34d8591-1756-44d3-8900-3e8f1c290113
Published on

ಮೈಸೂರು: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಸಾಧನೆ ಮಾಡದಿದ್ದರೂ, ಯಾವ ಪುರುಷಾರ್ಥಕ್ಕಾಗಿ ಜನಸಂಕಲ್ಪ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಪ್ರಶ್ನಿಸಿದರು.


ಪ್ರತಿಪಕ್ಷವಾಗಿ ಕಾಂಗ್ರೆಸ್, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವೈಫಲ್ಯ ಎತ್ತಿ ಹೇಳುತ್ತಿದೆ. ಆದರೆ, ಕಳೆದ ಚುನಾವಣೆ ವೇಳೆ ಜನರಿಗೆ ನೀಡಿದ್ದ ಪ್ರಣಾಳಿಕೆಯಲ್ಲಿನ ಯಾವ ಭರವಸೆ ಈಡೇರಿಸಲಾಗಿದೆ ಎಂಬುದನ್ನು ಜನರಿಗೆ ಬಿಜೆಪಿ ತಿಳಿಸಲಿ. ಜತೆಗೆ, ಕಾಂಗ್ರೆಸ್ ಸಹ ತಾನು ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆ ತಿಳಿಸಲಿದೆ. ಈ ಕುರಿತು ಬಿಜೆಪಿ ಜತೆಗೆ ಚರ್ಚೆಗೆ ನಮ್ಮ ಪಕ್ಷ ಸಿದ್ಧವಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.


ಬಿಜೆಪಿ ಆಡಳಿತ ಅವಧಿಯಲ್ಲಿ ನಿರುದ್ಯೋಗ ಸಮಸ್ಯೆ ಮುಗಿಲು ಮುಟ್ಟಿದೆ. ದುಡಿಯುವ ಕೈಗಳಿಗೆ ಸರ್ಕಾರ ಉದ್ಯೋಗ ನೀಡುತ್ತಿಲ್ಲ. ಬದಲಿಗೆ ಇರುವ ಉದ್ಯೋಗವನ್ನೂ ಕಿತ್ತುಕೊಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ ಸರ್ಕಾರಿ ಕಾಲೇಜುಗಳನ್ನು ಮುಚ್ಚಲಾಗುತ್ತಿದೆ.

ಬಿಟ್ ಕಾಯಿನ್ ಹಗರಣ ಅಂತಾರಾಷ್ಟ್ರೀಯ ಮಟ್ಟದ್ದಾಗಿದ್ದರೂ ಅದರ ಬಗ್ಗೆ ತನಿಖೆ ನಡೆಸದೆ ಕಾಂಗ್ರೆಸ್‌ನವರ ವಿರುದ್ಧ ಜಾರಿ ನಿರ್ದೇಶನಾಲಯದಿಂದ (ಇಡಿ) ದಾಳಿ ಮಾಡಿಸಲಾಗುತ್ತಿದೆ. ಆದ್ದರಿಂದ ಕಾಂಗ್ರೆಸ್ ಮುಕ್ತ ರಾಜ್ಯ ಮಾಡುತ್ತೇವೆ ಎನ್ನುತ್ತಿರುವ ಬಿಜೆಪಿಯವರಿಗೆ ಜನರು ಚುನಾವಣೆ ವೇಳೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಬಗ್ಗೆ ಭಯವಿರುವ ಕಾರಣದಿಂದಲೇ ಬಿಜೆಪಿಯವರು ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net