

ಹಾಸನ: ಯಾವುದೇ ಕಾಯಿಲೆ ಬಂದರೂ ಉದಾಸೀನತೆ ಮಾಡದೇ ಮೊದಲ ಹಂತದಲ್ಲಿಯೇ ಖಚಿತಪಡಿಸಿಕೊಂಡು ಅದಕ್ಕೆ ತಕ್ಕ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಶ್ರೀರಂಗ ಡಾಂಗೆ ತಿಳಿಸಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ, ಐಎಂಎ ಮಹಿಳಾ ಘಟಕ ಇವರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನಸ್ಸಿನಿಂದ ಬಂದ ಸೇವೆ ಸೇವೆಯಾಗಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಯಾವಾಗಲು ಮುಂಚೂಣಿಯಲ್ಲಿರುವ ರೆಡ್ ಕ್ರಾಸ್ ಸಂಸ್ಥೆಯು ಉತ್ತಮವಾಗಿ ಸೇವಾ ಮನೋಭಾವದಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದೆ. ಹಿಮೊಗ್ಲೊಬಿನ್, ಥೈರಾಯಿಡ್, ಬ್ಲಡ್ ಶುಗರ್ ಪರೀಕ್ಷೆ ನಿಯಮಿತವಾಗಿ ಮಾಡಿಸಿಕೊಳ್ಳಬೇಕು. ಮಹಿಳೆಯರಲ್ಲಿ ರಕ್ತ ಹೀನತೆ ತುಂಬಾ ಕಾಣಿಸಿಕೊಳ್ಳುತ್ತದೆ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರಿಯಾದ ಸಮಯಕ್ಕೆ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಶಿವಪ್ರಸಾದ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯಿಂದ ಹೆಲ್ತ್ ಕ್ಯಾಂಪ್ ಹೆಚ್ಚು ಮಾಡಲಾಗುತ್ತಿದ್ದು, ಇದರ ಸದುಪಯೋಗ ಕೂಡ ಅನೇಕರು ಪಡೆದುಕೊಳ್ಳುತ್ತಿದ್ದಾರೆ. ಇಂತಹ ಕೆಲಸಗಳು ಹೆಚ್ಚಿನ ರೀತಿಯಲ್ಲಿ ನಡೆಯಲಿ. ಬ್ಲಡ್ ಕ್ಯಾನ್ಸರ್ ತಪಾಸಣೆಯನ್ನು ಈ ಕ್ಯಾಂಪಿನಲ್ಲಿ ಮಾಡಲಾಗುತ್ತಿದೆ. ಮಹಿಳೆಯರಿಗಾಗಿ ಬೆಂಗಳೂರಿನಿಂದ ನುರಿತ ಕ್ಯಾನ್ಸರ್ ತಜ್ಞರನ್ನು ಕರೆಯಿಸಿದ್ದು, ಇದರ ಲಾಭವನ್ನು ಪಡೆದುಕೊಳ್ಳಬೇಕು. ಈಗ ಭೂಮಿಯಲ್ಲಿ ಮಾತ್ರವಲ್ಲ. ಆಕಾಶದತ್ತ ಕೂಡ ಮಹಿಳೆ ಕಾಲಿಟ್ಟಿದ್ದಾಳೆ. ಪ್ರಸ್ತುತದಲ್ಲಿ ಮಹಿಳೆಯರು ಪುರುಷರಿಗಿಂತ ಒಂದೆಜ್ಜೆ ಮುಂದೆಯೇ ಇದ್ದಾರೆ ಎನ್ನುವುದನ್ನು ಪ್ರಕೃತಿಯೇ ಹೇಳಿದೆ ಎಂದು ಹೇಳಿದರು.
ಆರೋಗ್ಯ ಶಿಬಿರದಲ್ಲಿ ನೂರಾರು ಜನ ಮಹಿಳೆಯರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡರು. ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ವೈದ್ಯರಾದ ಡಾ. ಮೋನಿಕಾ ಪನ್ಸಾರಿ ಶಿಬಿರದಲ್ಲಿ ಮಹಿಳೆಯರ ಕ್ಯಾನ್ಸರ್ ತಪಾಸಣೆ ಮಾಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಎಚ್.ಪಿ. ಮೋಹನ್, ನಿರ್ದೇಶಕಿ ಡಾ.ಎ. ಸಾವಿತ್ರಿ, ಭಾರತೀಯ ವೈದ್ಯಕೀಯ ಸಂಘದ ಮಹಿಳಾ ಘಟಕ ಅಧ್ಯಕ್ಷೆ ಡಾ. ನಿಸಾರ್ ಫಾತಿಮಾ, ಕಾರ್ಯದರ್ಶಿ ಡಾ. ದಿವ್ಯಾಶ್ರೀ, ಡಾ. ರತ್ನಮ್ಮ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ರಂಗಲಕ್ಷ್ಮೀ, ಕಸಾಪ ನಿಕಟಪೂರ್ವ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಚೈತ್ರಾ ನಾಯಕರಹಳ್ಳಿ, ನಿರ್ದೇಶಕರಾದ ಮಮತಾ ಪಾಟೀಲ್, ಕೆ.ಟಿ. ಜಯಶ್ರೀ, ಕಾವ್ಯಾಶ್ರೀ, ಬಿ.ಆರ್. ಉದಯಕುಮಾರ್, ಗಿರೀಗೌಡ, ಶಬ್ಬೀರ್ ಅಹಮದ್ ಇತರರು ಉಪಸ್ಥಿತರಿದ್ದರು.