ಯಾರೇ ಕಾರಣರಾದರೂ ಕ್ಷಮೆ ಇಲ್ಲ

DSC_6323
Published on

ಬೀದರ್: ತಾಲೂಕಿನ ಬರೀದಾಬಾದ್ ಮತ್ತು ಚಿಟಗುಪ್ಪ ತಾಲೂಕಿನ ಬೆಳಕೇರಾ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 30-40 ಜನ ಅಸ್ವಸ್ಥಗೊಂಡಿದ್ದು, ಸಕರ್ಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಜನರ ಜೀವ ಅತ್ಯಮೂಲ್ಯವಾಗಿದೆ. ಘಟನೆಗೆ ಯಾರೇ ಕಾರಣರಾದರೂ ಕ್ಷಮೆ ಇಲ್ಲ. ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ, ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಜನರಿಗೆ ಶುದ್ಧವಾದ ಕುಡಿಯುವ ನೀರು ಒದಗಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 185 ಗ್ರಾಮ ಪಂಚಾಯತಿಗಳಿದ್ದು, ಇಂಥ ಪ್ರಕರಣ ಪುನರಾವರ್ತನೆ ಆಗದಂತೆ ಕ್ರಮ ವಹಿಸಬೇಕು. ಗ್ರಾಪಂ 15ನೇ ಫೈನಾನ್ಸ್ ಅಡಿ ಹಣವಿದ್ದು, ಕುಡಿವ ನೀರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಬರೀದಾಬಾದ್ ಮತ್ತು ಬೆಳಕೇರಾದಲ್ಲಿ ನೀರು ಸರಬರಾಜು ಮಾಡುವ ಕೊಳವೆಬಾವಿ ಮತ್ತು ಪೈಪ್ ಲೈನ್ ಗೆ ಹೊಲಸು ನೀರು ಸೇರಿದ್ದರಿಂದ ಈ ಘಟನೆ ಜರುಗಿದೆ. ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗೂ ಸೇರಿಸಿ ಚಿಕಿತ್ಸೆ ಕೊಡಿಸಬೇಕು. ಸರ್ಕಾರದಿಂದಲೇ ವೆಚ್ಚ ಭರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವೆ ಎಂದು ಹೇಳಿದರು.
ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಮ್ ಖಾನ್, ಶಾಸಕ ಡಾ.ಸಿದ್ದು ಪಾಟೀಲ್, ಜಿಲ್ಲಾಕಾರಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್ಪಿ ಚನ್ನಬಸವಣ್ಣ ಲಂಗೋಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ., ಅಪರ ಜಿಲ್ಲಾಕಾರಿ ಶಿವಕುಮಾರ ಶೀಲವಂತ ಇತರರಿದ್ದರು. ಇದಕ್ಕೂ ಮುನ್ನ ಸಚಿವರು ಬ್ರಿಮ್ಸ್ ಹಾಗೂ ವಾಸು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net