ಯಾರೂ ಆಮಿಷಕ್ಕೆ ಒಳಗಾಗಬೇಡಿ

Laxman
ಅಥಣಿ ಆರ್.ಎಚ್. ಕುಲಕರ್ಣಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಷತ್ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ವಿಪ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿದರು. ಕೋಟ ಶ್ರೀನಿವಾಸ ಪೂಜಾರಿ, ಉಮೇಶ ಕತ್ತಿ, ಲಕ್ಷ್ಮಣ ಸವದಿ, ಶ್ರೀಮಂತ ಪಾಟೀಲ, ಪಿ.ರಾಜೀವ ಇತರರಿದ್ದರು.
Published on

ಅಥಣಿ: ಶಿಕ್ಷಕರು ಯಾವುದೇ ಆಮಿಷಗಳಿಗೆ ಒಳಗಾಗಬಾರದು. ನಿಮ್ಮ ಪರವಾಗಿ ಧ್ವನಿ ಎತ್ತಿ ಹೋರಾಟ ಮಾಡುವವರನ್ನು ಬೆಂಬಲಿಸಬೇಕು. ವಿಧಾನ ಪರಿಷತ್ ಚಿಂತಕರ, ಬುದ್ಧಿವಂತರ ಚಾವಡಿ. ಅಲ್ಲಿ ಏನೂ ಅರಿಯದ ಜನ ಬಂದು ಏನು ಮಾಡುವರು? ಅವರಿಂದ ಅಭಿವೃದ್ಧಿ, ಸುಧಾರಣೆ ಆಗುವುದಿಲ್ಲ. ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಸ್ಥಳೀಯ ಆರ್.ಎಚ್. ಕುಲಕರ್ಣಿ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾಯವ್ಯ ಶಿಕ್ಷಕರ, ಪದವೀಧರ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹಣಬಲ, ಜಾತಿಬಲ, ತೋಳ್ಬಲಕ್ಕೆ ಮತ ನೀಡಬೇಡಿ. ಎಲ್ಲರೂ ಒಗ್ಗಟ್ಟಿನಿಂದ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಾದ ಅರುಣ ಶಹಾಪುರ, ಹಣಮಂತ ನಿರಾಣಿ ಅವರನ್ನು ಬಹುಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮುಂಬರುವ ತಾಪಂ, ಜಿಪಂ ಚುನಾವಣೆಗೆ ಪರಿಷತ್ ಚುನಾವಣೆ ಪರಿಣಾಮ ಬೀರಲಿದೆ. ಕಾರಣ ಉತ್ತಮ ಅಭ್ಯರ್ಥಿಗಳಾದ ಅರುಣ ಶಹಾಪುರ, ಹಣಮಂತ ನಿರಾಣಿ ಅವರಿಗೆ ಮತದಾರರು ಬಹುಮತ ನೀಡಬೇಕು ಎಂದರು.

ಸಚಿವ ಉಮೇಶ ಕತ್ತಿ ಮಾತನಾಡಿ, ಪರಿಷತ್‌ನಲ್ಲಿ ನಿರಂತರವಾಗಿ ಹೋರಾಟ ಮಾಡುವ ಮತ್ತು ಶಿಕ್ಷಕರ ಧ್ವನಿಯಾಗಿ ಮಾತನಾಡುವ ವ್ಯಕ್ತಿಗಳು ಬೇಕು. ಅದಲ್ಲದೆ ಕಾಂಗ್ರೆಸಿನ ಅಭ್ಯರ್ಥಿ ಪ್ರಕಾಶ ಹುಕ್ಕೆರಿಗೆ ಶಿಕ್ಷಕರ ಸಮಸ್ಯೆ ಅರಿವು ಇಲ್ಲ. ಇನ್ನೂ ಪದವೀಧರ ಕ್ಷೇತ್ರದ ಸಂಕ ಅವರಿಗೆ ಜನರ ಪರಿಚಯವಿಲ್ಲ. ಹೇಗೆ ಇವರು ಪರಿಷತ್ತಿಗೆ ಹೋಗುತ್ತಾರೆ ಎಂದು ಪ್ರಶ್ನಿಸಿದರು. ಅಭ್ಯರ್ಥಿಗಳಾದ ಅರುಣ ಶಹಾಪುರ, ಹಣಮಂತ ನಿರಾಣಿ ಮತಯಾಚಿಸಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಎನ್.ಮಹೇಶ, ಶ್ರೀಮಂತ ಪಾಟೀಲ, ಪಿ. ರಾಜೀವ, ಮಹಾಂತೇಶ ಕವಟಗಿಮಠ, ಶಶಿಕಾಂತ ನಾಯಕ, ರಾಜೇಶ ನೆರ್ಲಿ, ಉಮೇಶರಾವ ಬಂಟೋಡಕರ, ಅಣ್ಣಾಸಾಹೇಬ ನಾಯಿಕ, ಸಂತೋಷ ಸಾವಡಕರ, ರಾಜು ಗುಡೋಡಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net