ಯಾರು ಏರುತ್ತಾರೆ ಮೇಯರ್ ಗದ್ದುಗೆ

10-mysoremunicipalcorporation (1)
Published on

ಮೈಸೂರು: ಕುತೂಹಲ ಮೂಡಿಸಿರುವ ಮೈಸೂರು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆ ಆ. 6ರಂದು ನಡೆಯಲಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಟ್ಟುಹಿಡಿದು ವಿಭಿನ್ನ ಕಾರ್ಯತಂತ್ರ ರೂಪಿಸಿವೆ.

ಈ ಹಿನ್ನೆಲೆಯಲ್ಲಿ ಸೋಮವಾರ ಮೂರೂ ಪಕ್ಷಗಳ ನಾಯಕರು ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ನಿಲುವುಗಳ ಕುರಿತು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ನಾಯಕರೆಲ್ಲ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೂರೂ ಪಕ್ಷಗಳು ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಪ್ರತ್ಯೇಕವಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾಗಿರುವ ಕುರಿತು ಸುಳಿವು ನೀಡಿದ್ದಾರೆ.

ಮೈತ್ರಿ ಇಲ್ಲ: ತನ್ವೀರ್ ಸೇಠ್
ಯಾವ ಪಕ್ಷದ ಜತೆಗೂ ಕಾಂಗ್ರೆಸ್ ಮೈತ್ರಿ ಬೇಡವೆಂಬ ಸೂಚನೆ ಬಂದಿದೆ. ಆದ್ದರಿಂದ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದರು. ಪಾಲಿಕೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 26, ಬಿಜೆಪಿಯ ಬಲ 27 ಇದೆ. ಸ್ಥಳೀಯ ಸಂಸ್ಥೆಯಲ್ಲಿ ಯಾರ ಸಂಖ್ಯೆ ಹೆಚ್ಚಿದೆಯೋ ಅವರು ಮೇಯರ್ ಆಗುತ್ತಾರೆ. ಏನೇನು ಆಗುತ್ತದೆಯೋ ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು. ಚುನಾವಣೆ ವಿಚಾರದಲ್ಲಿ ನನಗೆ ಅಷ್ಟೇನೂ ಆಸಕ್ತಿಯಿಲ್ಲ. ಕಳೆದ ಬಾರಿಯ ಘಟನೆಯಿಂದ ಪಾಠ ಕಲಿತಿರುವೆ. ಹೀಗಾಗಿ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದರು.

ಸ್ವತಂತ್ರವಾಗಿ ಸ್ಪರ್ಧೆ: ಎಲ್.ನಾಗೇಂದ್ರ

ಬಿಜೆಪಿಗೆ ಆಪರೇಷನ್ ಕಮಲ ಮಾಡುವ ಪರಿಸ್ಥಿತಿ ಎದುರಾಗಿಲ್ಲ. ಸದ್ಯದ ಮಟ್ಟಿಗೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಬಿಜೆಪಿ ಶಾಸಕ ಎಲ್.ನಾಗೇಂದ್ರ ತಿಳಿಸಿದರು. ಜೆಡಿಎಸ್‌ನೊಂದಿಗೆ ಕಳೆದ ವರ್ಷ ಮಾತುಕತೆಯೇ ಆಗಿಲ್ಲ. ಕಳೆದ ಬಾರಿ ಸಿ.ಎನ್.ಮಂಜೇಗೌಡ ಜೆಡಿಎಸ್‌ನಲ್ಲಿ ಇರಲೇ ಇಲ್ಲ. ಹೀಗಾಗಿ, ಜೆಡಿಎಸ್-ಬಿಜೆಪಿ ಮೈತ್ರಿ ಕುರಿತು ಅವರಿಗೇನು ಗೊತ್ತು? ಕಳೆದ ವರ್ಷದ ಮಾತುಕತೆ ಆ ವರ್ಷಕ್ಕೆ ಬಿಟ್ಟಿದ್ದು. ಈ ವರ್ಷದ ಚುನಾವಣೆ ಸಂಬಂಧ ಯಾವುದೇ ಮಾತುಕತೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಯಾವ ತಪ್ಪು ಸಂದೇಶವೂ ರವಾನೆಯಾಗುವುದಿಲ್ಲ. ಬದಲಾದ ಸನ್ನಿವೇಶದಲ್ಲಿ ಪಕ್ಷದ ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದನ್ನು ಪಾಲಿಸಲಾಗುವುದು ಎಂದರು.

ಜೆಡಿಎಸ್‌ನವರು ಮೇಯರ್: ಸಿ.ಎನ್.ಮಂಜೇಗೌಡ :
ಈ ಸಲ ಬಿಜೆಪಿ ಮಾತಿಗೆ ತಪ್ಪುವುದಿಲ್ಲ. ನೂರಕ್ಕೆ ನೂರರಷ್ಟು ಜೆಡಿಎಸ್‌ನವರೇ ಮೇಯರ್ ಆಗುತ್ತಾರೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ತಿಳಿಸಿದರು. ಈ ಹಿಂದಿನ ಮಾತುಕತೆಗೆ ಬಿಜೆಪಿ ಬದ್ಧವಾಗಲಿದೆ. ಅವರು ಮಾತಿಗೆ ತಪ್ಪುವುದಿಲ್ಲ ಎಂಬ ಭರವಸೆ ನಮಗಿದೆ. ಒಂದು ವೇಳೆ ಮಾತಿಗೆ ತಪ್ಪಿದರೆ ರಾಜ್ಯದಲ್ಲಿ ಬಿಜೆಪಿ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಆಂತರಿಕ ಒಡಂಬಡಿಕೆ ಪ್ರಕಾರ ಜೆಡಿಎಸ್‌ಗೆ ಮೇಯರ್, ಬಿಜೆಪಿಗೆ ಉಪ ಮೇಯರ್ ಸ್ಥಾನ ಬಿಟ್ಟುಕೊಡಲಾಗುತ್ತದೆ ಎಂದರು.
ಶಾಸಕ ಜಿ.ಟಿ.ದೇವೇಗೌಡ ಅವರೊಂದಿಗೆ ಎಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತೇನೆಂದು ಜಿಟಿಡಿ ಹೇಳಿದ್ದಾರೆ. ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಜತೆಗೂ ಮಾತುಕತೆ ನಡೆಸಲಿದ್ದೇವೆ. ಅವರೂ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಕೋರುತ್ತೇವೆ ಎಂದು ತಿಳಿಸಿದರು.

ಪಕ್ಷದ ಸೂಚನೆ ಪಾಲನೆ: ಎಸ್.ಟಿ.ಸೋಮಶೇಖರ್:
ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಬೇಕೇ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸಬೇಕೇ ಎಂಬುದನ್ನು ವರಿಷ್ಠರು ಸೂಚಲಿಸಲಿದ್ದಾರೆ. ಅವರು ಏನು ನಿರ್ಧಾರ ತಿಳಿಸುತ್ತಾರೆಯೋ ಅದುವೇ ಅಂತಿಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಕಳೆದ ಬಾರಿ ಮೈತ್ರಿಗೆ ಸೂಚನೆ ನೀಡಿತ್ತು. ಅದನ್ನು ಪಾಲಿಸಲಾಗಿತ್ತು. ಕಳೆದ ಬಾರಿಯದು ಕಳೆದ ಬಾರಿಗೇ ಸೀಮಿತ. ಈ ಸಲ ಪಕ್ಷದ ಸೂಚನೆಗಾಗಿ ಕಾಯಲಾಗುತ್ತಿದೆ. ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಫೋನ್ ಮೂಲಕ ನನ್ನೊಂದಿಗೆ ಮಾತನಾಡಿದ್ದಾರೆ. ಅವರಿಗೂ ಇದನ್ನೇ ನಾನು ಸ್ಪಷ್ಟಪಡಿಸಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net