

ಹಾಸನ: ನನ್ನ ರಾಜಕೀಯ ಜೀವನದಲ್ಲಿ ನಾನು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ಯಾರು ಏನೇ ಕುತ್ರಂತ್ರ ಮಾಡಿದರು ಏನೇ ಹೋರಾಟ ಮಾಡಿದರೂ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಸರ್ಕಾರ ಬರೋದು ಖಚಿತ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು.
ತಾಲೂಕಿನ ಕಟ್ಟಾಯ ದಲ್ಲಿ ಸೋಮವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, 1991ರಲ್ಲಿ ಲೋಕಸಭೆ ಗೆ ನಿಂತಾಗ ಎಲ್ಲ ಕಡೆ ದೇವೇಗೌಡರು ಸೋಲುತ್ತಾರೆ ಎಂಬ ಮಾತುಗಳು ಬಂದಾಗ ಜಿಲ್ಲೆಯ ಜನರು ನನಗೆ 33 ಸಾವಿರ ಲೀಡ್ ಕೊಟ್ಟು ಗೆಲ್ಲಿಸಿದ್ದು ನಾನು ಎಂದಿಗೂ ಮರೆಯುವುದಿಲ್ಲ ಕಟ್ಟಾಯ ಹೋಬಳಿ ಒಂದರಲ್ಲೇ 15 ಸಾವಿರ ಲೀಡ್ ಕೊಟ್ಟ ಹಿನ್ನೆಲೆಯಲ್ಲಿ ಲೋಕಸಭೆಗೆ ಹೊಗಿ ಪ್ರಧಾನಿ ಆಗಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಸ್ಮರಿಸಿದರು.
ಜಿಲ್ಲೆಯಲ್ಲಿ ಕೆಲವರು ಭಾಷಣ ಮಾಡಿದ್ದಾರೆ ಅವರ ಹೆಸರು ನಾನು ಹೇಳುವುದಿಲ್ಲ ಸೊತಿದ್ದವರನ್ನ ಗಂಡಸಿ ಕ್ಷೇತ್ರದಲದಲ್ಲಿ ಬೆಳೆಸಿದ್ದು ರೇವಣ್ಣ. ಇನ್ನೊಬ್ಬರನ್ನು ರಾಜ್ಯಸಭೆ ಮೆಂಬರ್ ಮಾಡಿದೆ. ನಾನು ಅವರ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಶಾಸಕ ಶಿವಲಿಂಗೇಗೌಡ ಹಾಗೂ ಎಚ್.ಕೆ ಜವರೇಗೌಡ ಅವರಿಗೆ ಕುಟುಕಿದರು.
ತಾನು ಮುಖ್ಯಮಂತ್ರಿ ಆಗಿದ್ದ ವೇಳೆ ಕಟ್ಟಾಯ ಭಾಗದ ಜನರ ಅನುಕೂಲಕ್ಕೆ ಯಗಚಿ ಜಲಾಶಯ ನಿರ್ಮಾಣ ಮಾಡಿದೆ ಆದರೆ 1999 ರಲ್ಲಿ ನನ್ನನ್ನ ಸೋಲಿಸಿ ಜಿ. ಪುಟ್ಟಸ್ವಾಮಿ ಗೌಡ ಹಾಸನ ಜಿಲ್ಲೆಯ ಸುಮಾರು 45 ಸಾವಿರ ಎಕರೆ ಜಮೀನಿಗೆ ಅನುಕೂಲ ಆಗಬೇಕಿದ್ದ ನೀರನ್ನು ಚಿಕ್ಕಮಗಳೂರಿಗೆ ಕೊಂಡೊಯ್ಯುವ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಈ ಭಾಗದ ಜನರಿಗೆ ಅನಾನುಕೂಲ ಆಗಿದೆ ಎಂದರು.
ಈ ಭಾಗಕ್ಕೆ ಕಾರ್ಖಾನೆ ತರಬೇಕು ಎಂದು ಇಲ್ಲಿಯ ಕೆಲವರು ಸಲಹೆ ನೀಡಿದ್ದಾರೆ. ಇನ್ನು ಎರಡೂವರೆ ವರ್ಷ ರಾಜ್ಯಸಭೆ ಸದಸ್ಯ ಆಗಿರುತ್ತೇನೆ ನನ್ನ ಅವಧಿಯ ಒಳಗೆ ಈ ಭಾಗದಲ್ಲಿ ಕಾರ್ಖಾನೆ ಸ್ಥಾಪಿಸಿ ಸ್ಥಳೀಯರಿಗೆ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಾವೇರಿ ನೀರಿಗಾಗಿ ಹೋರಾಡಿದ್ದೇನೆ, ಹೇಮಾವತಿ ನೀರನ್ನ ನಾವು ಬಳಸಬಾರದು ಅಂತ ಆದೇಶ ಮಾಡ್ತಾರೆ. ರಾಜ್ಯದಲ್ಲಿ ಅಧಿಕಾರದ ದರ್ಪ ಮಿತಿಮೀರಿದೆ. ಮೂರು ಸಲ ಬಂದು ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸ್ಥಿನಿ ಎಂದು ಸಿ.ಎಂ ಹೇಳಿದ್ದಾರೆ ಆದರೆ 1991ರಲ್ಲಿ ಹೇಗೆ ನನ್ನನ್ನು ಗೆಲ್ಲಿಸಿದ್ದಿರೋ ಅದೇ ರೀತಿ ಈಗ ಪ್ರಜ್ವಲ್ ಕೈ ಹಿಡಿಯಬೇಕು ಎಂದು ಮನವಿ ಮಾಡಿದರು.
ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಕಷ್ಟಕಾಲದಲ್ಲಿ ಕಟ್ಟಾಯ ಭಾಗದ ಜನ ನಮ್ಮ ಕೈಹಿಡಿದಿದ್ದಾರೆ.
ಕಟ್ಟಾಯ ಭಾಗದಲ್ಲಿ 10 ವರ್ಷದ ಹಿಂದೆ ಹೇಗಿತ್ತು ಈಗ ಹೇಗಿದೆ ಎಂಬುದನ್ನು ಎಲ್ಲರೂ ಗಮನಿಸಬೇಕು. ಈ ಹಿಂದೆ ಕಟ್ಟಾಯ ಕಾಂಗ್ರೆಸ್ ಕೋಟೆಯಾಗಿತ್ತು. ಆದರೆ ಯಾವ ಕೆಲಸಗಳು ಆಗಲಿಲ್ಲ ಆದರೆ ಇವತ್ತು ಜೆಡಿಎಸ್ ಭದ್ರಕೋಟೆಯಾಗಿದೆ. ಯಾವ ಹಂತದಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂಬುದನ್ನು ಜನ ತಿಳಿಯಬೇಕಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎಲ್ಲಾ ಅವಧಿಯಲ್ಲಿ ಕೂಡ ಬರಗಾಲ ಬರುತ್ತದೆ, ಕಳೆದ 11 ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳು ಬತ್ತಿವೆ. ಇದರ ಜೊತೆಗೆ ಸರಿಯಾದ ಸಮಯಕ್ಕೆ ವಿದ್ಯುತ್ ನೀಡದೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ದ್ವೇಶ ಸಾಧಿಸುತ್ತಿದೆ. ಅಧಿಕಾರಕ್ಕೆ ಬರೊ ಮೊದಲು ಗ್ಯಾರಂಟಿ ಘೋಷಿಸುವಾಗ ಎಲ್ಲರಿಗೂ ಫ್ರೀ ಎಂದ್ರು. ಅಗಲೇ ಅರ್ಥ ಮಾಡಿಕೊಳ್ಳಬೇಕಿತ್ತು. ಎಲ್ಲಾ ವರ್ಗಕ್ಕೂ ಫ್ರಿ ಕೊಟ್ಡಿರೋದು ಕೇವಲ ಬರಗಾಲ ಮಾತ್ರ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗೆ ರೈತರ ಮೇಲೆ ಕೋಪವಿದೆ. ವಿದ್ಯುತ್ ಸಮಸ್ಯೆ ಮಿತಿಮೀರಿದೆ. ಟಿಸಿ ಕೊಡೋಕೆ ಇವರಿಂದ ಆಗ್ತಿಲ್ಲ. ನಾಲ್ಕು ಗಂಟೆ ಭಾಷಣ ಮಾಡಿದ್ರು ಬಜೆಟ್ ನಲ್ಲಿ ರೈತರಿಗೆ ಒಂದು ರೂಪಾಯಿ ಸಹ ಬಿಡುಗಡೆ ಮಾಡಲಿಲ್ಲ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು 300 ಕೋಟಿ ರೂ.ವೆಚ್ಚದಲ್ಲಿ ಕಟ್ಟಾಯ ಭಾಗದಲ್ಲಿ ರಸ್ತೆ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯಾವ ಮುಖ ಇಟ್ಗೊಂಡು ಓಟು ಕೇಳ್ತಾರೆ. ಹಾಸನ ಅಭಿವೃದ್ಧಿ ಗೆ ಒಂದು ರೂಪಾಯಿ ಕೊಡಲಾಗದವರಿಗೆ ಯಾಕೆ ಓಟು ಕೊಡಬೇಕು ಎಂದು ಪ್ರಶ್ನಿಸಿದರು.
2018ರಲ್ಲಿ ಬರಗಾಲ ಆವರಿಸಿತ್ತು ಆಗ ಕುಮಾರಸ್ವಾಮಿ ರೈತರ ಕಣ್ಣಿರು ಒರೆಸಲು 50 ಸಾವಿರ ರೂ. ಸಾಲ ಮನ್ನಾ ಮಾಡಿದರು. ಆದರೆ ಕಾಂಗ್ರೆಸ್ ಸರ್ಕಾರ ರೈತರಿಗೆ ಮಾರಕವಾದ ನೀತಿ ಅನುಸರಿಸುತ್ತಿದೆ ಆದುದರಿಂದ ಫಲವತ್ತಾದ ಜಮೀನಿನಲ್ಲಿ ಬೆಳೆಯುವ ಕಾಂಗ್ರೆಸ್ ಗಿಡ ಕಿತ್ತು ಹಾಕುವಂತೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಎಚ್.ಕೆ ಕುಮಾರಸ್ವಾಮಿ ಜೆಡಿಎಸ್ ಮುಖಂಡರಾದ ರಾಜೇಗೌಡ, ಕರೀಗೌಡ, ಎಸ್.ದ್ಯಾವೆಗೌಡ, ರಂಗಶಟ್ಟಿ,ಮೊಸಳೆ ಹೊಸಳ್ಳಿ ಚಂದ್ರಣ್ಣ ಕಾರ್ಲೆ ಇಂದ್ರೇಶ್, ನಾರಾಯಣ ಗೌಡ, ಮಾಯೆಗೌಡ, ಕುಮಾರ್, ರುದ್ರಪ್ಪ ಇತರರು ಇದ್ದರು.