ಯಾರಿಗೆ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷಗಾದಿ?

0000
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾತಿ ನಿಗದಿಯಾಗಿದೆ.
ಮೊದಲ ಅವಧಿಯಲ್ಲಿ ಹಿಂದುಳಿದ ಎ ವರ್ಗದ ಮಹಿಳಾ ಅಭ್ಯರ್ಥಿಗೆ ನಿಗದಿಯಾಗಿತ್ತು. ಬಿಜೆಪಿ ಸದಸ್ಯೆ ಸುಧಾಲಕ್ಷ್ಮೀನಾರಾಯಣ್ ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ಮಹಿಳಾ ಅಭ್ಯರ್ಥಿಗೆ ನಿಗದಿಯಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಸದಸ್ಯೆ ಫರ್ಹಾನತಾಜ್ ಆಯ್ಕೆಯಾಗಿದ್ದರು.
31 ಸದಸ್ಯರನ್ನು ಹೊಂದಿರುವ ದೊಡ್ಡಬಳ್ಳಾಪುರ ನಗರ ಸಭೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 9, ಜೆಡಿಎಸ್ 7 ಹಾಗೂ 3 ಪಕ್ಷೇತರ ಸದಸ್ಯರು ಇದ್ದಾರೆ. ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಆಗುವ ಮೊದಲೇ ಇಲ್ಲಿನ ನಗರಸಭೆಯಲ್ಲಿ ಈ ಎರಡೂ ಪಕ್ಷಗಳು ಒಟ್ಟಾಗಿ ಎರಡೂವರೆ ವರ್ಷಗಳ ಕಾಲ ಆಡಳಿತ ನಡೆಸಿದ್ದವು. ಈಗ ರಾಜ್ಯದಲ್ಲಿ ಅಧಿಕೃತವಾಗಿಯೇ ಬಿಜೆಪಿ, ಜೆಡಿಎಸ್ ಮೈತ್ರಿ ಇರುವಾಗ ಇಲ್ಲಿಯೂ ಈ ಹಿಂದಿನ ಮೈತ್ರಿಯೇ ಮುಂದುವರಿಯುವುದು ಖಚಿತ ಎಂದು ಮೂಲಗಳು ತಿಳಿಸಿವೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಗರಸಭೆ ಸದಸ್ಯ ಎಂ.ಜಿ.ಶ್ರೀನಿವಾಸ್ ಬಿಜೆಪಿ ಸೇರಿದ್ದಾರೆ. ಬಿಜೆಪಿ ನಗರ ಘಟಕದ ಅಧ್ಯಕ್ಷ ಹಾಗೂ ಸದಸ್ಯ ಎಚ್.ಎಸ್.ಶಿವಶಂಕರ್ ಹಾಗೂ ಮತ್ತೊಬ್ಬ ಸದಸ್ಯ ಶಿವಣ್ಣ ಕಾಂಗ್ರೆಸ್ ಸೇರಿದ್ದಾರೆ. ಈ ಮೂವರು ಇಲ್ಲದೇ ಇದ್ದರೂ ಬಿಜೆಪಿ, ಜೆಡಿಎಸ್ ಮೈತ್ರಿಯಿಂದಾಗಿ ಬಹುಮತಕ್ಕೆ ಕೊರತೆ ಆಗುವುದಿಲ್ಲ. ಆದರೆ ಪಕ್ಷದಿಂದ ವಿಪ್ ಜಾರಿಯಾದರೆ ಪಕ್ಷ ಸೂಚಿಸಿದ ಅಭ್ಯರ್ಥಿ ಪರವಾಗಿ ಮತ ಹಾಕುವುದು ಅನಿವಾರ್ಯವಾಗಲಿದೆ. ಇಲ್ಲವಾದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸದಸ್ಯತ್ವ ರದ್ದಾಗಲಿದೆ.


ಅಧ್ಯಕ್ಷ ಸ್ಥಾನ ಯಾವ ಪಕ್ಷದ ಪಾಲು?: ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಅಭ್ಯರ್ಥಿಗೆ ನಿಗದಿಯಾಗಿರುವುದರಿಂದ ಬಿಜೆಪಿಯಲ್ಲಿ ಐದು ಹಾಗೂ ಜೆಡಿಎಸ್ ಪಕ್ಷದಲ್ಲಿ ನಾಲ್ವರು ಮಹಿಳಾ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಮೊದಲ ಅವಧಿಯಲ್ಲಿ ಬಿಜೆಪಿ ಸದಸ್ಯರಿಗೆ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಬಿಟ್ಟುಕೊಟ್ಟಿದ್ದರಿಂದ, ಎರಡನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ನಮ್ಮ ಪಕ್ಷದ ಸದಸ್ಯರಿಗೆ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಆದರೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಸಹಜವಾಗಿಯೇ ನಗರಸಭೆಯಲ್ಲಿ ನಮ್ಮದೇ ಪಕ್ಷದ ಸದಸ್ಯರು ಅಧ್ಯಕ್ಷರಾಗಿರಬೇಕು ಎಂದು ಬಯಸಿದರೆ ಅಧ್ಯಕ್ಷ ಸ್ಥಾನ ಯಾವ ಪಕ್ಷದ ಪಾಲಾಗಲಿದೆ ಎನ್ನುವ ಕುತೂಹಲ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net