ಗದಗ: ಗದಗ- ಬೆಟಗೇರಿ ನಗರಸಭೆ ಅಧ್ಯಕ್ಷಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕ್ಲೈಮಾಕ್ಸ್ ಹಂತ ತಲುಪಿದೆ. ಕಳೆದ ನಾಲ್ಕಾರು ದಿನಗಳಿಂದ ನಡೆದಿರುವ ಎಲ್ಲ ರಾಜಕೀಯ ಬೆಳವಣಿಗೆಗೆ ಸೋಮವಾರ ತೆರೆ ಬೀಳಲಿದೆ. ನಿರೀಕ್ಷೆಯಂತೆ ಮ್ಯಾಜಿಕ್ ನಂಬರ್ 18 ಹೊಂದಿರುವ ಬಿಜೆಪಿಯು ನಗರಸಭೆ ಅಧಿಕಾರ ಹಿಡಿಯುತ್ತಾ ಅಥವಾ ಕಾನೂನಿನ ಮೂಲಕ ಗದ್ದುಗೆ ಏರಲು ಹವಣಿಸುತ್ತಿರುವ ಕಾಂಗ್ರೆಸ್ ಕೈ ಮೇಲಾಗುತ್ತ ಎಂಬ ಕುತೂಹಲಕ್ಕೆ ತೆರೆಬೀಳಲಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಆಯಾ ಪಕ್ಷದ ಮುಖಂಡರು ಅಜ್ಞಾತ ಸ್ಥಳದಲ್ಲಿರಿಸಿದ್ದಾರೆ. ಎಲ್ಲ ಸದಸ್ಯರು ನೇರವಾಗಿ ಚುನಾವಣೆ ನಡೆಯುವ ಸಮಯಕ್ಕೆ ಹಾಜರಾಗಲಿದ್ದಾರೆ. ಭಾನುವಾರ ಬಹುತೇಕ ಸದಸ್ಯರ ಮೊಬೈಲ್ ಸ್ವಿಚ್ ಆಫ್, ನಾಟ್ ರಿಚೇಬಲ್ ಆಗಿದ್ದವು. ಗೌಪ್ಯ ಸ್ಥಳದ ಮಾಹಿತಿ ಯಾರಿಗೂ ಲಭ್ಯವಾಗಬಾರದು ಎಂಬ ಕಾರಣಕ್ಕಾಗಿ ಮುಖಂಡರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ವ್ಯಾಪಕ ಟೀಕೆ
ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಲು ಅರ್ಜಿ ಸಲ್ಲಿಸಿರುವ ವಿಪ ಸದಸ್ಯರಾದ ಮೋಹನ ಕೊಂಡಜ್ಜಿ, ಪ್ರಕಾಶ ರಾಠೋಡ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿವೆ. ‘ನಗರಸಭೆ ಚುನಾವಣೆ ಸಮಯದಲ್ಲಿ ಎಲ್ಲಿದ್ರಿ?, ಒಂದು ಸಲವೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿಲ್ಲ. ಆದರೂ ಆರು ತಿಂಗಳಿನಿಂದ ಗದಗ ನಗರದಲ್ಲಿ ಇದ್ದೀರಿ ಎಂದು ದಾಖಲೆ ನೀಡಿದ್ದೀರಿ’ ಎಂದು ಮೋಹನ ಕೊಂಡಜ್ಜಿ ಅವರನ್ನು ಜನರು ಪ್ರಶ್ನಿಸಿದ್ದಾರೆ. ‘ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿ ಬುದ್ಧಿಜೀವಿ ಎನಿಸಿಕೊಂಡ ಹನುಮಂತಯ್ಯ ಅವರೇ ಹನುಮಂತನಿಗೆ ತಲೆ ಬಾಗಿದ್ದು ಸರಿಯೇ?’ ಎಂದು ಎಲ್.ಹನುಮಂತಯ್ಯ ಅವರನ್ನು ಕುಟುಕಿದ್ದಾರೆ. ‘ಪ್ರಕಾಶ ರಾಠೋಡ ಅವರೇ ಗದಗ ಬೆಟಗೇರಿ ಅವಳಿ ನಗರದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು?’ ಎಂದು ಜನರು ಟೀಕೆ ಮಾಡಿ ನಾಯಕರ ನಡೆಯನ್ನು ಖಂಡಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ಪ್ರಕರಣ
ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರಕ್ಕಾಗಿ ನಡೆದಿರುವ ಘಟನೆಗಳ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಲಭಿಸಿಲ್ಲ. ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದ್ದರೂ (ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಮತ್ತು ಪಕ್ಷೇತರ 1) ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಅಲ್ಲಿ ಬಿಜೆಪಿಯ ಐದಾರು ಜನ ವಿಧಾನ ಪರಿಷತ್ ಸದಸ್ಯರು ತಮ್ಮ ಹೆಸರನ್ನು ಕಲಬುರಗಿ ಪಟ್ಟಣದ ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಗೊಂದಲ ಸೃಷ್ಟಿಯಾಗಿದ್ದರಿಂದ ಇದುವರೆಗೂ ಮೇಯರ್, ಉಪ ಮೇಯರ್ ಚುನಾವಣೆ ನಡೆದಿಲ್ಲ. ಆದರೆ, ಗದಗ ಬೆಟಗೇರಿ ನಗರಸಭೆಯಲ್ಲಿ ಬಿಜೆಪಿಗೆ ಸರಳ ಬಹುಮತ (35ರಲ್ಲಿ 18 ಸ್ಥಾನಗಳು) ದೊರೆತಿದೆ. ಒಂದು ಪಕ್ಷಕ್ಕೆ ಅಧಿಕಾರ ಹಿಡಿಯಲು ಅಗತ್ಯ ವಿರುವ (ಜನರಿಂದಲೇ ಆಯ್ಕೆಯಾಗಿರುವ) ಸಂಖ್ಯಾಬಲ ಹೊಂದಿದ್ದರೂ ಎರಡನೇ ಸ್ಥಾನದಲ್ಲಿರುವ ಪಕ್ಷ ವಿಧಾನ ಪರಿಷತ್ ಸದಸ್ಯರನ್ನು ಮತದಾರ ಪಟ್ಟಿಯಲ್ಲಿ ನೋಂದಣಿ ಮಾಡಿಸಿ ಹೆಚ್ಚು ಸಂಖ್ಯಾಬಲ ತೋರಿಸಲು ಕಾನೂನಿನಲ್ಲಿ ಅವಕಾಶವಿದೆ ಎಂಬುದು ತಿಳಿದಿಲ್ಲ. ಹೀಗಾಗಿ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕಾಂಗ್ರೆಸ್ನತ್ತ ವಾಲಿದ ಪಕ್ಷೇತರರು
ಗದಗ ಬೆಟಗೇರಿ ನಗರಸಭೆಯಲ್ಲಿ 35 ವಾರ್ಡ್ಗಳಿವೆ. ಬಿಜೆಪಿ 18, ಕಾಂಗ್ರೆಸ್ ಮತ್ತು ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಸಂಸದರ ಮತವನ್ನು ಹಿಡಿದುಕೊಂಡರೆ ಸಂಖ್ಯಾಬಲ 19ಕ್ಕೆ ಏರಿಕೆಯಾಗಲಿದೆ. ಬಿಜೆಪಿಗೆ ಈಗಾಗಲೇ ಸರಳ ಬಹುಮತ ಸಿಕ್ಕಿದೆ. ಆದರೆ, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಜತೆಗೆ ಸ್ಥಳೀಯ ಶಾಸಕರ ಮತವನ್ನು ಹಿಡಿದರೆ ಕಾಂಗ್ರೆಸ್ ಬಳಿಯೂ (15 ಕಾಂಗ್ರೆಸ್, 2 ಪಕ್ಷೇತರರು, 1 ಶಾಸಕ) 18 ಸದಸ್ಯರ ಸಂಖ್ಯಾಬಲವಿದೆ. ಹೀಗಾಗಿ ಕಾಂಗ್ರೆಸ್ ಸಹ ಅಧಿಕಾರ ಹಿಡಿಯಲು ಹಕ್ಕು ಮಂಡಿಸುವ ಸಾಧ್ಯತೆಗಳಿವೆ. ಅತ್ತ ವಿಧಾನ ಪರಿಷತ್ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ವಿಷಯವನ್ನೂ ಕಾಂಗ್ರೆಸ್ ಮುಖಂಡರು ಕೈಬಿಟ್ಟಿಲ್ಲ. ಹೀಗಾಗಿ ಸೋಮವಾರ ನಗರಸಭೆಯಲ್ಲಿ ನಡೆಯಲಿರುವ ಘಟನೆಗಳು ಕುತೂಹಲ ಕೆರಳಿಸಿವೆ.