

ತಿ.ನರಸೀಪುರ: ವರುಣ ಕ್ಷೇತ್ರದಲ್ಲಿ ಕಾಟಾಚಾರಕ್ಕೆ ಭಾರತೀಶಂಕರ್ ಅವರನ್ನು ಅಭ್ಯರ್ಥಿಯಾಗಿ ಮಾಡಿಲ್ಲ. ನನಗೆ ಪ್ರತಿಯೊಂದು ಕ್ಷೇತ್ರವೂ ಮುಖ್ಯವಾಗಿದ್ದು, 123 ಸಂಖ್ಯೆಯ ಗುರಿ ಮುಟ್ಟುವ ಉದ್ದೇಶ ಹೊಂದಿದ್ದೇನೆ. ವರುಣ ಕ್ಷೇತ್ರದಲ್ಲೂ ಗೆಲ್ಲುವ ಉದ್ದೇಶದಿಂದ ಅಭ್ಯರ್ಥಿ ಹಾಕಿದ್ದು, ಸರಳ ಸಜ್ಜನಿಕೆಯ ಭಾರತೀಶಂಕರ್ ಅವರನ್ನು ಬೆಂಬಲಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ತಿ.ನರಸೀಪುರ ಪುರಸಭೆ ವ್ಯಾಪ್ತಿಯ ತಿರುಮಕೂಡಲಿನ ಅದಿಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಹಿಂದ ವರ್ಗದ ಸಮಾವೇಶದಲ್ಲಿ ಅಭ್ಯರ್ಥಿ ಭಾರತೀ ಶಂಕರ್ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು. ವರುಣ ಕ್ಷೇತ್ರದಲ್ಲಿ ಎಲ್ಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಚುನಾವಣೆ ಎದುರಿಸಲು ಸಮಸ್ಯೆ ಇಲ್ಲ. ನಾವು ಯಾರನ್ನೂ ಟೀಕಿಸುವುದು ಬೇಡ. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಗೆಲುವಿಗೆ ಬೇಕಾದ ಮಾರ್ಗಸೂಚಿ ಅನುಸರಿಸೋಣ ಎಂದು ಸಲಹೆ ನೀಡಿದರು.
ರಾಜಸ್ಥಾನ, ಛತ್ತೀಸ್‌ಗಡ್ ಮತ್ತಿತರ ಕಡೆ ಕಾಂಗ್ರೆಸ್ ಸರ್ಕಾರ ಇದೆ. ಆ ರಾಜ್ಯಗಳಲ್ಲಿ 2 ಸಾವಿರ ರೂ. ಕೊಡುವ ಯೋಜನೆ ಜಾರಿಗೊಳಿಸದೆ ರಾಜ್ಯದಲ್ಲಿ ಮತ ನೀಡಿ ಎರಡು ಸಾವಿರ ರೂ. ನೀಡುತ್ತೇವೆ ಎನ್ನುತ್ತಿರುವ ಕಾಂಗ್ರೆಸ್ ಪಕ್ಷದವರು ಜನರಿಗೆ ಚುನಾವಣೆ ಸಮಯದಲ್ಲಿ ಕಿವಿಗೆ ಹೂ ಇಡುವ ಕೆಲಸ ಮಾಡುತ್ತಿದ್ದಾರೆ. ಅವರು ನೀಡುತ್ತಿರುವುದು ಗ್ಯಾರಂಟಿ ಕಾರ್ಡ್ ಅಲ್ಲ, ಅದು ಡೂಪ್ಲಿಕೇಟ್ ಕಾರ್ಡ್ ಎಂದು ವ್ಯಂಗ್ಯವಾಡಿದರು.
ಈಗ ಎಲ್ಲೆಲ್ಲೂ ಜಾತಿ ರಾಜಕಾರಣ ಆರಂಭವಾಗಿಬಿಟ್ಟಿದೆ. ನಮ್ಮ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿ ಆಗಬೇಕೆನ್ನುವ ಮನಸ್ಥಿತಿ ಎಲ್ಕರಲ್ಲೂ ಇದೆ. ನಮ್ಮ ಸಮಾಜದ ವ್ಯಕ್ತಿ ಮುಖ್ಯಮಂತ್ರಿಯಾದರೆ ಸಮಾಜಕ್ಕೆ ಗೌರವ ಸಿಗುತ್ತದೆ ಎಂಬ ಮನೋಭಾವ ಅನೇಕರಲ್ಲಿದೆ. ನಾನು ಮಂತ್ರಿಯಾದರೆ ಒಕ್ಕಲಿಗ ಸಮಾಜದವರೆಲ್ಲ ಮನೆಯಲ್ಲಿ ಕುಳಿತು ನೆಮ್ಮದಿಯಿಂದ ಊಟ ಮಾಡಲು ಸಾಧ್ಯವೇ, ನಿಮ್ಮ ದುಡಿಮೆ ನೀವು ಮಾಡಲೇಬೇಕು. ಮುಖ್ಯಮಂತ್ರಿ ಒಂದು ಸಮಾಜಕ್ಕಷ್ಟೇ ಮುಖ್ಯಮಂತ್ರಿಯಲ್ಲ. ಪ್ರತಿ ಕುಟುಂಬಕ್ಕೆ ರಕ್ಷಣೆ ನೀಡಬೇಕಾದ್ದು ಆತನ ಕರ್ತವ್ಯ ಎಂದ ಎಚ್‌ಡಿಕೆ, ಜನಪ್ರತಿನಿಧಿಗಳು ಜಾತಿ ಹೆಸರಲ್ಲಿ ಚಿಂತನೆ ಮಾಡುವುದು ಬಿಟ್ಟು ಬಡತನ ಹೋಗಲಾಡಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ ಎಂದರು.
ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ಮಾಜಿ ಶಾಸಕ ಚಿಕ್ಕಣ್ಣ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್, ಜಿಪಂ ಮಾಜಿ ಅಧ್ಯಕ್ಷ ಸಿದ್ದಾರ್ಥ, ರಾಜ್ಯ ವಕ್ತ್ತಾರ ತಾಯೂರು ಪ್ರಕಾಶ್, ಮೈಮುಲ್ ನಿರ್ದೇಶಕ ಉಮಾಶಂಕರ್, ಕೊಳ್ಳೇಗಾಲ ಜೆಡಿಎಸ್ ಅಭ್ಯರ್ಥಿ ಪುಟ್ಟಸ್ವಾಮಿ, ಎಚ್.ಕೆ.ರಾಮು, ಸೋಮಣ್ಣ, ಚನ್ನೇಗೌಡ, ಬಾಲಕೃಷ್ಣ, ಬಸವರಾಜು, ಶಿವಪ್ರಸಾದ್, ಮೂಗೂರು ಶಿವಮೂರ್ತಿ, ಕುಪ್ಪೇಗಾಲ ಬಾಬು ಇತರರು ಇದ್ದರು.