ಯಾರ ವಿರುದ್ಧವೂ ಟೀಕೆ, ಆರೋಪ ಮಾಡುವುದಿಲ್ಲ: ಪ್ರೀತಂ ಗೌಡ

ಯಾರ ವಿರುದ್ಧವೂ ಟೀಕೆ, ಆರೋಪ ಮಾಡುವುದಿಲ್ಲ: ಪ್ರೀತಂ ಗೌಡ
Published on

ಹಾಸನ :  ನಗರದ ವಿವಿಧೆಡೆ ಶುಕ್ರವಾರ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಬಿರುಸಿನ ಪ್ರಚಾರ ನಡೆಸಿದರು.

ನಗರದ ಬಸಟ್ಟಿಕೊಪ್ಪಲು, ಪಿಡಬ್ಲೂೃಡಿ ಕ್ವಾಟ್ರಸ್ ರಸ್ತೆ , ಆರ್.ಸಿ ರಸ್ತೆ, ಕುರುಹಿನ ಶೆಟ್ಟಿ ಕಲ್ಯಾಣ ಮಂಟಪ ರಸ್ತೆ, ರಂಗೋಲಿ ಹಳ್ಳ ಬ್ರಹ್ಮಕುಮಾರಿ ಸಮಾಜ ರಸ್ತೆ, ಸ್ಲೇಟರ್ಸ್ ಹಾಲ್ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದರು. ಪ್ರಚಾರದ ಉದ್ದಕ್ಕೂ ಮನೆ ಮನೆಗೆ ತೆರಳಿ, ಈ ಬಾರಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದ ಪ್ರೀತಂ ಗೌಡ ಅವರಿಗೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಸಾಥ್ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಈ ಬಾರಿ ವಿರೋಧ ಪಕ್ಷದ ಅಭ್ಯರ್ಥಿಯ ಹೆಸರು ಹಾಗೂ ಮುಖಂಡರ ಹೆಸರನ್ನು ಹೇಳದ ರೀತಿಯಲ್ಲಿ ಚುನಾವಣೆ ಎದುರಿಸುವ ಶಪಥ ಮಾಡಿದ್ದೇನೆ. ಇಲ್ಲಿಯವರೆಗೂ ನಾಮಪತ್ರ ಸಲ್ಲಿಕೆ ಇತ್ತು. ಯಾರು ಅಭ್ಯರ್ಥಿ ಆಗುತ್ತಾರೆ ಏನು ಅಂತ ಮಾತನಾಡಬೇಕಿತ್ತು. ಈಗ ನಾನು ಒಂದು ಶಪಥ ಮಾಡಿದ್ದೇನೆ. ಅಭ್ಯರ್ಥಿ ಹೆಸರಾಗಲಿ, ನನ್ನ ವಿರೋಧ ಪಕ್ಷದ ಯಾವುದೇ ಮುಖಂಡರ ಹೆಸರುಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ನಾನು ಮಾಡಿರುವ ಕೆಲಸಕ್ಕೆ ಆಶೀರ್ವಾದ ಮಾಡಿ ಅಂತ ಕೈ ಮುಗಿದು ಕೇಳಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದೇನೆ. ನಾನು ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿ, ಯಾವುದೇ ಅಭ್ಯರ್ಥಿ, ಯಾವುದೇ ಪಕ್ಷದ ಬಗ್ಗೆ ಮಾತನಾಡಲ್ಲ. ಪ್ರೀತಂಗೌಡ ಕೆಲಸ ಮಾಡಿದ್ದಾನೆ. ಮಾಡಿರುವ ಕೆಲಸ ಕಣ್ಮುಂದೆ ಇದೆ. ಆಶೀರ್ವಾದ ಮಾಡಿ. ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ ಅಂತ ಕೈ ಮುಗಿದು ಮತದಾರರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ಕೋವಿಡ್ ಸಂದರ್ಭದಲ್ಲಿ ನಾನು ಜನರ ಜತೆ ನಿಂತು ಅವರ ಸಮಸ್ಯೆಗಳನ್ನು ಅಲಿಸಿದ್ದೇನೆ. ಕಳೆದ 25 ವರ್ಷಗಳಿಂದ ಆಗದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಕೆಲಸಕ್ಕೆ, ಅಶೀರ್ವಾದ ಮಾಡುವಂತೆ ಮತದಾರರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net