

ಚಿಕ್ಕೋಡಿ: ಶ್ರೀಶೈಲದಲ್ಲಿ ಕರ್ನಾಟಕ ಭಕ್ತಾದಿಗಳ ಸಲುವಾಗಿ ಯಾತ್ರಿ ನಿವಾಸ ನಿರ್ಮಾಣ ಮಾಡಲು ರಾಜ್ಯ ಸರ್ಕಾರ 85 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಹೇಳಿದರು.
ಚಿಕ್ಕೋಡಿ ತಾಲೂಕಿನ ಯಡೂರನಲ್ಲಿ ಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಯಡೂರನಿಂದ ಶ್ರೀಶೈಲ ವರೆಗೆ 560 ಕಿ.ಮೀ. ರಸ್ತೆ ಎರಡು ಬದಿಗೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀಶೈಲ ಜದ್ಗುರುಗಳು ಯಡೂರನಿಂದ ಶ್ರೀಶೈಲವರೆಗೆ ಗಿಡಗಳನ್ನು ನೆಡಲು ಮುಂದಾಗಿರುವ ಕಾರ್ಯ ಶ್ಲಾಘನೀಯ. ಶ್ರೀಶೈಲ ಮಲ್ಲಿಕಾರ್ಜುನ ಭಕ್ತನಾಗಿರುವ ನಾನು ಈ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಯಡೂರನಿಂದ ಶ್ರೀಶೈಲದವರೆಗೆ ಪಾದಯಾತ್ರೆ ಕೈಗೊಂಡು ಅದರಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಸಮಾಜ ಸುಧಾರಣೆಯತ್ತ ಶ್ರೀಶೈಲ ಜಗದ್ಗುರುಗಳು ಹೆಜ್ಜೆ ಇಟ್ಟಿದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀಶೈಲ ಜದ್ಗುರುಗಳ ಜನ್ಮ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಸಮಾಜಕ್ಕೆ ಅರ್ಪಣೆ ಮಾಡುತ್ತಿದ್ದಾರೆ. ಮಠಾಧೀಶರಿಂದ ಸಮಾಜ ಅಭಿವೃದ್ಧಿಯಾಗುತ್ತಿದೆ. ಮಠಾಧೀಶರು ಶಿಕ್ಷಣ ಬಗ್ಗೆ ಅರಿವು ಮೂಡಿಸಬೇಕು. ಶ್ರೀಶೈಲ ಜದ್ಗುರುಗಳ ಸಸಿ ನೆಡುವ ಕಾರ್ಯಕ್ರಮ ಪ್ರಶಂಸನೀಯ ಎಂದರು.
ಶ್ರೀಶೈಲ ಜದ್ಗುರುಗಳು ಮಾತನಾಡಿ, ಗಿಡಗಳನ್ನು ದೇವರಂತೆ ಗೌರವಿಸಬೇಕು. ಗಿಡಗಳಿಗೆ ದೈವತ್ವ ಕಲ್ಪನೆಯನ್ನು ಕೊಡಬೇಕು ಅಂದಾಗ ಮಾತ್ರ ಗಿಡಗಳನ್ನು ಬೆಳೆಸಲು ಸಾಧ್ಯ. ಸಚಿವ ಉಮೇಶ ಕತ್ತಿಯವರು ತಮ್ಮ ಇಲಾಖೆಯಿಂದ ಉಚಿತವಾಗಿ ಸಸಿಗಳನ್ನು ನೀಡಲಿದ್ದಾರೆ. ಕರ್ನಾಟಕದಿಂದ ಸಹಸ್ರಾರು ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳುವ ಭಕ್ತರಿಗೆ ಈ ಗಿಡಗಳು ಅನುಕೂಕವಾಗಲಿವೆ. ಶ್ರೀಶೈಲ ಕ್ಷೇತ್ರದ ಅಭಿವೃದ್ಧಿಗಾಗಿ 85 ಕೋಟಿ ರೂ. ಮಂಜೂರು ಮಾಡಿರುವ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಹೇಳಿದರು.
ಮಾಂಜರಿ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಮಂದ್ರೂಪದ ರೇಣುಕಾ ಶಿವಾಚಾರ್ಯ ಶ್ರೀ, ನೂಲಮಠದ ಗುರುಸಿದ್ದೇಶ್ವರ ಶ್ರೀ, ಜಮಖಂಡಿ ಗೌರಿಶಂಕರ ಸ್ವಾಮೀಜಿ, ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಜಿತರಾವ ದೇಸಾಯಿ, ಗ್ರಾಪಂ ಸದಸ್ಯ ಅಜಯ ಸೂರ್ಯವಂಶಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.