

ಬನ್ನೂರು : 15ಕ್ಕೂ ಹೆಚ್ಚಿನ ವಿವಿಧ ಆರ್ಥಿಕ ಚಟುವಟಿಕೆಗಳು, ಶೂನ್ಯ ಸಾಲ, 8 ಕೋಟಿಗೂ ಅಧಿಕ ವಹಿವಾಟು, ಸಹಕಾರ ಸಂಘದ ಸದಸ್ಯರ ನಡುವಿನ ಬಾಂಧವ್ಯ, ಸಹಕಾರ ಸಂಘದಲ್ಲಿ ಆಡಳಿತ ಮಂಡಳಿಯ ಪಾತ್ರ ಹೀಗೆ ನಾನಾ ವಿಚಾರಗಳನ್ನು ತಿಳಿದ ತಮಿಳುನಾಡಿನ ನಮಕ್ಕಲ್ ಸಹಕಾರ ಸಂಘದ ಸದಸ್ಯರು, ನಿರ್ದೇಶಕರು ತಮ್ಮಲ್ಲೂ ಇಲ್ಲಿನ ಆಡಳಿತ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಇರಾದೆ ವ್ಯಕ್ತಪಡಿಸಿದರು.
ಬೆಂಗಳೂರಿನ ಕ್ಷೇತ್ರೀಯ ಸಹಕಾರಿ ಪ್ರಭುತ್ವ ಸಂಸ್ಥಾನ ಹಾಗೂ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯ ಸಹಕಾರದೊಂದಿಗೆ ತಮಿಳುನಾಡು ಸರ್ಕಾರದ ಸಹಕಾರ ಸಚಿವರು ತಮಿಳುನಾಡು ವಿಧಾನಸಭೆಯಲ್ಲಿ ಮಾಡಿದ ಘೋಷಣೆಯಂತೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸಹಕಾರಿ ಒಕ್ಕೂಟದ ಅಧಿಕಾರಿಗಳನ್ನು ಒಳಗೊಂಡ 60 ಪ್ರತಿನಿಧಿಗಳ ಗುಂಪು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ಇಲ್ಲಿನ ಅನುಭವಗಳನ್ನು, ಕಾರ್ಯಚಟುವಟಿಕೆಯನ್ನು ಪರಿಶೀಲಿಸಿದರು.
ಸಹಕಾರಿ ಸಂಘದ ಚಟುವಟಿಕೆಗಳೆಲ್ಲವನ್ನು ಕಣ್ಣಾರೆ ಕಂಡು ಪುಳಕಿತಗೊಂಡ ತಮಿಳುನಾಡಿನ ಸಹಕಾರಿ ಸಂಘದ ಅಧಿಕಾರಿಗಳು, ಅವುಗಳಿಂದ ಸಂಸ್ಥೆಗೆ ಆಗುತ್ತಿರುವ ಲಾಭವನ್ನು ಕಾರ್ಯನಿರ್ವಹಣಾ ಅಧಿಕಾರಿ ಕ್ಯಾತೇಗೌಡರಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರ ಸಂಘಕ್ಕೆಂದು ನೀಡುವ ಸೌಲಭ್ಯಗಳಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರುವ ಮೊದಲ ಸಹಕಾರಿ ಸಂಘ ಯಾಚೇನಹಳ್ಳಿಯದ್ದಾಗಿದೆ. ಸುತ್ತಮುತ್ತಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಹಿವಾಟಿನಲ್ಲಿ ಯಾಚೇನಹಳ್ಳಿ ಪ್ರಾಥಮಿಕ ಸಹಕಾರಿ ಸಂಘ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಕಡಿಮೆ ಬಂಡವಾಳದ ಮೂಲಕ ಆರಂಭವಾದ ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಂದು ಗ್ರಾಮ ಮಟ್ಟದಲ್ಲಿಯೇ 8 ಕೋಟಿ ರೂ.ಗೂ ಅಧಿಕ ವಹಿವಾಟನ್ನು ನಡೆಸುತ್ತಿರುವ ಹೆಗ್ಗಳಿಕೆ ಇದೆ. ಸಹಕಾರ ಸಂಘ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇರಬೇಕೆನ್ನುವ ಸಲುವಾಗಿಯೇ ಲಾಭದ ಆಸೆಯಿಂದಲೂ ಹೊರತಾದ ಜನೌಷಧ ಕೇಂದ್ರ ಕುಡಿಯುವ ನೀರಿನ ಸೌಲಭ್ಯ, ರಸಗೊಬ್ಬರದ ಮಾರಾಟ ಸೇರಿದಂತೆ ಅನೇಕ ಚಟುವಟಿಕೆಯನ್ನು ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು.
ಸಹಕಾರಿ ಸಂಘದ ಸದಸ್ಯರಿಗೆ 1 ಲಕ್ಷದ ಉಚಿತ ವಿಮೆ ಸೌಲಭ್ಯವನ್ನು ಒದಗಿಸಿದ್ದು, ಸದಸ್ಯರು ಮೃತಪಟ್ಟಲ್ಲಿ ಶವಸಾಗಿಸುವ ವಾಹನದ ವ್ಯವಸ್ಥೆ ಹಾಗೂ 3 ಸಾವಿರ ರೂ. ಸಹಾಯ ಧನವನ್ನು ನೀಡುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಮಕ್ಕಲ್ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕ ಶರವಣನ್, ಸಹಕಾರಿ ಪ್ರಚಾರಾಧಿಕಾರಿ ವಿ. ವಿಜಯ್‌ಕುಮಾರ್, ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎಂ.ಚಂದ್ರು, ವೈ.ಕೆ.ಬೋರೇಗೌಡ, ವೈ.ಎಚ್. ಹನುಮಂತೇಗೌಡ, ವೈ.ಜಿ.ಮಹೇಂದ್ರ, ಎಚ್.ಪಿ.ಪ್ರತಿಭಾ ಮಲ್ಲೇಶ್, ಕೆಂಪಮ್ಮ ಸಿದ್ದೇಗೌಡ, ರಾಜು, ದುರ್ಗೇಶ್, ವೈ.ಎಂ. ನಾಗೇಂದ್ರ, ವೈ.ಎಸ್.ಶಿವರಾಮು, ಕಾರ್ಯನಿರ್ವಹಣಾ ಅಧಿಕಾರಿ ವೈ.ಕೆ.ಕ್ಯಾತೇಗೌಡ ಸೇರಿದಂತೆ ಪ್ರಮುಖರು ಇದ್ದರು.
ಸಹಕಾರ ಸಂಘಗಳಿಗೆ ಭೇಟಿ ನೀಡಿ ಅಲ್ಲಿ ಯಾವ ಯಾವ ಕೆಲಸಗಳು ಆಗಿದೆ ಎಂದು ಕೇಳಿ ತಿಳಿಯಬೇಕಿದೆ. ಆದರೆ ಇಲ್ಲಿನ ಸಹಕಾರ ಸಂಘಕ್ಕೆ ಭೇಟಿ ನೀಡಿದರೆ ಇಲ್ಲಿನ ಸಹಕಾರ ಸಂಘದಲ್ಲಿ ಕೈಗೊಂಡಿರುವ ಕಾರ್ಯಗಳೇ ಕಣ್ಣಿಗೆ ಕಟ್ಟುವಂತಿದ್ದು ಕೇಳಿ ತಿಳಿದುಕೊಳ್ಳಬೇಕಾದ ಅವಶ್ಯಕತೆಯೇ ಇಲ್ಲ. ಇದೊಂದು ಮಾದರಿ ಸಹಕಾರ ಸಂಘವಾಗಿದೆ.
ಎಸ್.ಸೌಮ್ಯಾ
ಪ್ರಾದೇಶಿಕ ಸಹಕಾರಿ ನಿರ್ವಹಣಾ ಸಂಸ್ಥೆ ಉಪನಿರ್ದೇಶಕಿ